ನಾನು ಶಿವಮೊಗ್ಗೆಯಲ್ಲಿದ್ದ ದಿನಗಳವು. ಶಿವಮೊಗ್ಗ ಬಹಳ ಸುಂದರವಾದ ಊರು ಮತ್ತು ಅಲ್ಲಿನ ಜನರೂ ಅಷ್ಟೇ ಬಹಳ ಸೂಕ್ಷ್ಮ ಸ್ವಭಾವದವರು. ಅಲ್ಲಿದ್ದಷ್ಟೂ ದಿನಗಳೂ ನಾನು ನನ್ನ ಗೆಳತಿಯರೊಂದಿಗೆ ದಿನವೂ ಸಂಜೆ ಕೃಷ್ಣ ಕೆಫೆ ಗೆ ಕಾಫಿ ಕುಡಿಯಲು ಹೋಗುವುದು ವಾಡಿಕೆಯಾಗಿತ್ತು. ಹೀಗೆ ಒಂದು ಬಾರಿ ಕಾಫಿ ಹೀರುತ್ತಿದ್ದಾಗ ಪಕ್ಕದ ಬೇಕರಿಯಿಂದ ಜೋರು ಜೋರಾಗಿ ಹೊಡೆದಾಡುತ್ತಿರುವ ಶಬ್ದ ಕೇಳಿ ಬಂತು. ಎಲ್ಲರೂ ಆ ಕಡೆಗೆ ದೌಡಾಯಿಸಿದೆವು. ಬೇಕರಿ ಮಾಲೀಕ ಸುಮಾರು 7-8 ವರ್ಷದ ಬಾಲಕನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದ. ಸುತ್ತ ಮುತ್ತಲಿದ್ದವರೆಲ್ಲ ಆ ಬಾಲಕನನ್ನು ಕನಿಕರದಿಂದ ನೋಡುತ್ತಿದ್ದರೆ ವಿನ: ಯಾರೂ ಏನೊಂದೂ ಮಾತಾಡಲಿಲ್ಲ. ನಾನೂ ಕೂಡ ಆ ಜನರಲ್ಲಿ ಒಬ್ಬಳಾಗಿದ್ದೆ. ಕಡೆಗೆ ಹಿರಿಯರೊಬ್ಬರು ಆ ಮಗುವನ್ನು ಬಿಡಿಸಿಕೊಂಡು ವಿಷಯ ಏನೆಂದು ಕೇಳಿದರು. ಬೇಕರಿ ಮಾಲೀಕನ ಕೋಪ ಇನ್ನೂ ತಣ್ಣಗಾದ೦ತಿರಲಿಲ್ಲ ಗುರ್.. ಗುರ್... ಎನ್ನುತ್ತಲೇ "ನೋಡೀ ಸ್ವಾಮಿ, ಈ ಹುಡ್ಗ ಜಾಮೂನ್ ಕೇಳ್ದ.. ಆದ್ರೆ ಕಾಸ್ ಮಾತ್ರ ತಂದಿಲ್ಲ. ಕೊಡಲ್ಲ ಅಂದಿದ್ದಕ್ಕೆ ಜಾಮೂನ್ ಡಬ್ಬೀಗೆ ಕೈ ಹಾಕಿ ಬಿಟ್ಟ. ಕತ್ತೆ ಭಡವ..." ಹಿರಿಯರು ಹೋಗ್ಲಿ ಬಿಡಪ್ಪ ಮಗು ಚಿಕ್ಕದು ತಿಳುವಳಿಕೆ ಇಲ್ಲ. ಹೊಡೆದರೆ ಏನ್ ಪ್ರಯೋಜನ?" ಅಂತ ಸಮಾಧಾನ ಮಾಡಿದ್ರು. ಸೇರಿದ್ದ ಜನರೆಲ್ಲಾ ಚದುರಿದರೂ ನನಗೇಕೋ ಅಲ್ಲಿಂದ ಹೋಗಲು ಕಾಲುಗಳೇ ಬರುತ್ತಿಲ್ಲ. ಕಂಬದ ಹಾಗೆ ನಿಂತುಬಿಟ್ಟಿದ್ದೆ. ಹೊಡೆತದ ನೋವು ತಾಳಲಾರದೆ ಅಲ್ಲೇ ಬಿದ್ದಿದ್ದ ಹುಡುಗ ಎರಡೇ ಜಾಮೂನು... ಎರಡೇ ಎರಡು ಜಾಮೂನು... ಅಂತ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದ. ಇದನ್ನು ನೋಡಿದ ಎಂಥವರಿಗೂ ಸಂಕಟವಾಗುತ್ತಿತ್ತು. ನನ್ನ ಗೆಳತಿಯರೆಲ್ಲ ಅದಾಗಲೇ ಹೊರತು ಹೋಗಿದ್ದರು. ವಾಚ್ ನೋಡಿಕೊಂಡೆ ಆಗಲೇ 7.45 ಸಂಜೆ 8 ಗಂಟೆಯ ಒಳಗೆ ಹಾಸ್ಟೆಲ್ ಗೆ ಹೋಗದಿದ್ದರೆ ಆಮೇಲೆ ಪ್ರವೇಶವಿಲ್ಲ. ತತ್ ಕ್ಷಣ ವೇಗವಾಗಿ ಹಾಸ್ಟೆಲ್ ಕಡೆಗೆ ಓಡಿದೆ.
ರಾತ್ರಿ ಎಲ್ಲ ನಿದ್ದೆ ಇಲ್ಲ. ಆ ಹುಡುಗನ ಮುಖವೇ ಕಣ್ಮುಂದೆ ಬಂದ ಹಾಗಾಗುತ್ತಿತ್ತು. ಪಾಪ ಮಗು ಜಾಮೂನು ತಿನ್ನಲು ಆಸೆ ಪಟ್ಟಿತ್ತು. ಅಷ್ಟೊಂದು ಜನರಿದ್ದರಲ್ಲ ಅವರಲ್ಲಿ ಒಬ್ಬರಿಗೂ ಎರಡು ಜಾಮೂನು ಕೊಡಿಸುವ ಯೋಗ್ಯತೆ ಇರಲಿಲ್ಲವೇ? ಬೇರೆಯವರ ಮಾತು ಬಿಡಿ ನಾನು?? ನಾನು ಕೂಡ ಸುಮ್ಮನೆ ಇದ್ದೆನಲ್ಲ. ನಾನಾದರೂ ಕೊಡಿಸಬಹುದಿತ್ತು. ಬರೀ ಎರಡು ಜಾಮೂನಿಗಾಗಿ ಅಷ್ಟೊಂದು ಒದೆಗಳನ್ನು ತಿಂದನಲ್ಲ ಪಾ.. ಪ. ಇನ್ನೂ ಬೇಕರಿಯ ಯಜಮಾನ? ಛೇ ಅವನಿಗಂತೂ ಸ್ವಲ್ಪವೂ ಮಾನವೀಯತೆ ಇಲ್ಲ. ಅವನಿಗೂ ಮಕ್ಕಳಿದ್ದಾರೆ. ಮಕ್ಕಳ ಮನಸ್ಸು ತಿಳಿಯದ ಕ್ರೂರಿಯೇ? ಮನಸ್ಸಿಗೆ ಸಮಾಧಾನ ಆಗುವಷ್ಟು ಅವನಿಗೆ ಬೈದೆ.
ಮರುದಿನ ಗೆಳತಿಯರ ಬಳಿ ಈ ವಿಷಯವನ್ನೆಲ್ಲ ಚರ್ಚಿಸಿದೆ ಒಬ್ಬೊಬ್ಬರದೂ ಒಂದೊಂದು ಅನಿಸಿಕೆ. ಇಂಥದೆಲ್ಲ ನಡೀತಾ ಇರುತ್ತೆ ಇದಕ್ಕೆಲ್ಲ ತಲೆಕೆಡಿಸ್ಕೊಂಡರೆ ಆಗುತ್ತಾ ಅಂತ ಒಬ್ಬಳಂದ್ರೆ ನೀನು ಇವರನ್ನೆಲ್ಲ ಉದ್ಧಾರ ಮಾಡಕ್ಕಾಗುತ್ತಾ ಅನ್ನೋ ವ್ಯಂಗ್ಯ ಇನ್ನೊಬ್ಬಳದು. ಅವರಾರಿಗೂ ಈ ವಿಷಯಗಳ ಬಗ್ಗೆ ಆಸಕ್ತಿ ಇಲ್ಲವೆಂಬುದು ಗೊತ್ತಾಗಿತ್ತು. ಆದರೆ ನನ್ನ ಜಾಗೃತ ಮನಸ್ಸು ಮಾತ್ರ 'ನೀನು ಬದಲಾಗಬೇಕಿದೆ' ಎಂದು ಪದೇ ಪದೇ ಹೇಳುತ್ತಿತ್ತು. ಹೌದು.. ನಾನು ಬದಲಾಗಬೇಕಿದೆ. ಆ ಹುಡುಗನನ್ನು ನಾನೇ ಕಾಪಾಡಬಹುಡಿತ್ತು. ಹಿರಿಯರೊಬ್ಬರು ಬಂದು ಅವನನ್ನು ಬಿಡಿಸುವವರೆಗೂ ಕಾಯಬೇಕಿರಲಿಲ್ಲ. ಇಂತಹ ಎಷ್ಟೊಂದು ಸಂದರ್ಭಗಳಲ್ಲಿ ನಾನು ಮೂಕಳಾಗಿ ನಿಂತು ನೋಡಿಲ್ಲ? ನನಗಿದು ಖಂಡಿತಾ ಮೊದಲನೆಯ ಬಾರಿಯೇನಲ್ಲ. ಪ್ರತಿಯೊಂದು ಬಾರಿ ಅನ್ಯಾಯವಾಗುತ್ತಿದ್ದಾಗಲೂ ಪ್ರತಿಭಟಿಸದೇ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡ೦ತಿದ್ದೇನೆ. ಬೇರೆಯವರ ವಿಷಯ ಬಿಡಿ.. ಸ್ವತ: ನನಗೆ ಅನ್ಯಾಯವಾದಾಗಲೂ ಏನೂ ಆಗಿಲ್ಲವೆಂಬಂತೆ ಸಹಿಸಿಕೊಂಡಿದ್ದೇನೆ. ಚಿಕ್ಕ ಉದಾಹರಣೆಯೆಂದರೆ ಬಸ್ ಕಂಡಕ್ಟರ್ ಸರಿಯಾದ ಚಿಲ್ಲರೆ ಕೊಡದೆ ಉಳಿದ ಹಣವನ್ನು ತನ್ನ ಜೇಬಿಗೆ ಇಳಿಸಿದಾಗಲೂ ಎನೂ ಹೇಳದೆ 'ಚಿಲ್ಲರೆ ಕಾಸು ತಾನೇ ತಿಂದು ಸಾಯ್ಲಿ' ಎಂದು ಮನಸ್ಸಿನಲ್ಲೇ ಅವನನ್ನು ಶಪಿಸಿದ್ದೇನಾಗಲಿ ಧ್ವನಿ ತೆಗೆದು ಜಗಳ ಮಾಡಿಲ್ಲ. ಇಂತಹ ಅಮಾನುಷ ಕೃತ್ಯ ಗಳನ್ನೆಲ್ಲ ಸಹಿಸಿಕೊಳ್ಳಬಾರದು ಮತ್ತು ಬೇರೆಯವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ತಡೆಯಬೇಕು ಎಂದೆಲ್ಲ ಮನಸ್ಸಿನಲ್ಲೇ ಶಪಥ ಮಾಡಿಕೊಂಡೆ.
ಸುಮಾರು ದಿನಗಳ ನಂತರ ಗಾಂಧಿಬಜಾರಿನಲ್ಲಿ ನಡೆದು ಬರುತ್ತಿದ್ದಾಗ ಮತ್ತದೇ ಹುಡುಗ ಕಣ್ಣಿಗೆ ಬಿದ್ದ. ಯಾರದೋ ಪರ್ಸ್ ಹೊಡೆದು ಓಡಿ ಬರುತ್ತಿದ್ದ ಅವನನ್ನು ತಡೆದೆ. ಕೈ ಬಿಡಿಸಿಕೊಂಡು ಓಡಿ ಹೋಗುತ್ತಿದ್ದವನಿಗೆ " ನೋಡು ನಿಂಗೆ ಐವತ್ತು ರೂಪಾಯಿ ಕೊಡ್ತೀನಿ ಓಡಿ ಹೋಗಬೇಡ" ಅಂದೆ. ಕಣ್ಣರಳಿಸಿ " ಏನು? ಐವತ್ತು ರೂಪಾಯ?" ಅಂದ. "ಹ್ಞೂ... ಐವತ್ತು ರೂಪಾಯಿ!!... ಬೇಕರಿನಲ್ಲಿ ಜಾಮೂನು ಕದಿಯಕ್ಕೆ ಹೋಗಿ ಹೊಡೆಸಿಕೊಳ್ತಿದ್ದೆಯಲ್ಲ ಅವತ್ತು ನಾನು ನಿನ್ನ ನೋಡಿದ್ದೀನಿ. ಆದ್ರೆ ನೀನು ನಂಗೆ ನಿಜ ಹೇಳ್ಬೇಕು.. ನೀನು ಯಾರು? ಅಪ್ಪ ಅಮ್ಮ ಎಲ್ಲಿದ್ದಾರೆ? ಯಾಕೆ ಕಳ್ತನ ಮಾಡ್ತಿದಿಯಾ? ಅಂತ". ಅದಕ್ಕೆ ಅವನು ಅಳುತ್ತ "ಅಪ್ಪ ಅಮ್ಮ ಇಬ್ರೂ ಕೂಲಿ ಮಾಡ್ತಾರೆ.. ಅಪ್ಪ ಬರೀ ಕುಡಿಯೋದು ಹೊಡೆಯೋದು ಅಷ್ಟೇ. ತಿನ್ನಕ್ಕೆ ಎನೋ ಇಲ್ಲಾ ಅಂದ್ರೆ ಅಮ್ಮನೇ ದುಡ್ಡು ಕದ್ದು ಕೊಂಡು ಬಾ ಅಂತ ಕಳುಸ್ತಾಳೆ" ಅಂದ. ಶಾಲೆಗೆ ಹೋಗಲ್ವಾ ನೀನು ಅಂತ ಕೇಳಿದೆ. ಅಯ್ಯೋ ತಿನ್ನಕ್ಕೆ ಗತಿಯಿಲ್ಲ ಅಂದ್ರೆ ಇಸ್ಕೂಲಿಗೆ ಎಲ್ಲಿಂದ ಬರುತ್ತೆ ಕಾಸು? ಅಂದ. ಛೇ.. ಹೌದಲ್ಲವಾ ಅಂತ ಹಾಗೆ ಬಡತನ ಮತ್ತೆ ಅದರ ಪರಿಣಾಮಗಳ ಬಗ್ಗೆ ಯೋಚಿಸುತ್ತಿದ್ದೆ. ಅಕ್ಕ ಐವತ್ತು ರೂಪಾಯಿ ಕೊಡ್ತೀನಿ ಅಂದ್ಯಲ್ಲ ಕೊಡು ಅಂದ. ಏನೂ ಕೇಳಿಸದ ಹಾಗೆ ನಿಂತಿದ್ದ ನನ್ನ ನೋಡಿ 'ಅಯ್ಯ.. ಐವತ್ತ್ ರೂಪಾಯ್ ಕೊಡ್ತೀನಿ ಅಂತ ಸುಳ್ಳು ಹೇಳಿದ್ಯಲ್ಲಕ್ಕಾ...' ಅಂತ ಅಂದವನೇ ನೋಡು ನೋಡುತ್ತಿದ್ದಂತೆಯೇ ಕಣ್ಣಿಗೆ ಕಾಣದಂತೆ ಮರೆಯಾದ. ಅವನ ಬಗ್ಗೆ ಸಾವಿರಾರು ಯೋಚನೆಗಳು ಹರಿದಾಡ ತೊಡಗಿದವು. ಹ.. ಸಿ... ವು.... ಈ ಮೂರಕ್ಷರದ ಅಟ್ಟಹಾಸ ಎಂಥದಲ್ಲವೇ? ಪಾಪ ಹಸಿವಿಗಾಗಿ ಕಳ್ಳತನದ ಮಾರ್ಗ ಹಿಡಿದಿದ್ದನಾಗಲಿ ಸ್ವಭಾವತಃ ಕಳ್ಳನಲ್ಲ. ಅವನಲ್ಲೂ ಒಳ್ಳೆಯ ಮನುಷ್ಯನಾಗುವ ಲಕ್ಷಣಗಳಿವೆ. ಆದರೆ ಪರಿಸ್ಥಿತಿ?? ಇಂತಹ ಲಕ್ಷಾಂತರ ಮಕ್ಕಳ ಭವಿಷ್ಯ ಮೊಗ್ಗಿನಲ್ಲೇ ಕಮರಿ ಹೋಗುತ್ತಿದೆಯಲ್ಲ. ಇದಕ್ಕೆಲ್ಲ ಉಪಾಯವೇ ಇಲ್ಲವೇ?? ಈ ಮಕ್ಕಳ ಸುಧಾರಣೆ ಯಾವ ಕಾಲಕ್ಕೋ? ಹೀಗೆ ಮನಸ್ಸು ಗೊಂದಲದ ಗೂಡಾಗಿತ್ತು. ದೈನಂದಿನ ಕೆಲಸಗಳಲ್ಲಿ ಇವುಗಳನ್ನೆಲ್ಲ ಯೋಚಿಸಲು ಸಮಯವಾದರೂ ಎಲ್ಲಿ?? ದಿನಗಳೆದಂತೆ ನಾನೂ ಈ ಸಂಗತಿಯನ್ನು ಮರೆತೆ.
ಸುಮಾರು ತಿಂಗಳುಗಳೇ ಕಳೆದಿರಬಹುದು. ಮತ್ತೆ ಆ ಹುಡುಗ.. ಅದೇ ಆ ಜಾಮೂನು ಹುಡುಗ ಕಣ್ಣಿಗೆ ಬಿದ್ದ. ತಕ್ಷಣ ಸರಸರನೇ ಅವನೆಡೆಗೆ ಹೆಜ್ಜೆ ಹಾಕಿದೆ. ತಳ್ಳು ಗಾಡಿಯ ಮೇಲೆ ಹೆಚ್ಚಿಟ್ಟಿದ್ದ ಕಲ್ಲಂಗಡಿ ಹಣ್ಣಿನ ತುಂಡುಗಳನ್ನೇ ನೋಡುತ್ತಾ ನಿಂತಿದ್ದ. ಪಾಪ ಹುಡುಗ ಹಸಿದಿರಬೇಕೆಂದು ಅವನ ಹತ್ತಿರ ಹೋದೆ. "ಎನೋ ಪುಟ್ಟಾ.. ಹಸಿವಾಗ್ತಿದೆಯಾ?" ಅಂತ ಕೇಳಿದೆ. "ಹೌದಕ್ಕ.. ತುಂಬಾ ಹಸಿವು" ಅಂದ. ಅವನನ್ನು ಕರೆದುಕೊಂಡು ಕೃಷ್ಣ ಕೆಫೆಗೆ ಬಂದೆ. ಒಂದು ಮಸಾಲೆ ದೋಸೆ ಬೇಕೆಂದ. ಸರಿ ಅದನ್ನು ಆರ್ಡರ್ ಮಾಡಿದೆ. ನಾನು ಕೂಡ ಒಂದು ಕಾಫಿ ತಗೊಂಡು ಅವನ ಬಗ್ಗೆ ವಿಚಾರಿಸುತ್ತಾ ಹೋದೆ. ಅಷ್ಟರಲ್ಲಿ ಮಸಾಲೆ ದೋಸೆ ಬಂತು. ಟೇಬಲ್ ಮೇಲೆ ಇಡುತ್ತಿದ್ದಂತೆ ಒಂದೇ ಏಟಿಗೆ ತಿಂದು ಬಿಡುವವನಂತೆ ಪ್ಲೇಟನ್ನು ತನ್ನತ್ತ ಎಳೆದುಕೊಂಡು ತಿನ್ನತೊಡಗಿದ. ನಿಜ ಹಸಿವು ಎನ್ನುವುದು ಬಡವರ ಶತ್ರು. ಹಸಿವು ಎಂಬ ರಾಕ್ಷಸ ಈ ಹುಡುಗನ ಬದುಕನ್ನೇ ನರಕ ಮಾಡಿದ್ದಾನೆ ಎಂದು ಯೋಚಿಸುತ್ತಿದ್ದೆ. ಏನೋ ಮನಸ್ಸಿನಲ್ಲಿ ಸುಳಿಯಿತು. ಹೇ.. ಈ ಹುಡುಗನಿಗೆ ಜಾಮೂನೆಂದರೆ ಇಷ್ಟ ಅಲ್ಲವೇ? ಕೃಷ್ಣ ಕೆಫೆಯಲ್ಲಿ ಜಾಮೂನು ಇಲ್ಲವೆಂದು ಗೊತ್ತಾದ ಮೇಲೆ ಸರಿ ಪಕ್ಕದಲ್ಲೇ ಇದ್ದ ಬೇಕರಿಯಿಂದ ತರೋಣವೆಂದು ಎದ್ದೆ. "ಪುಟ್ಟಾ.. ನೀನು ತಿಂತಾ ಇರು. ನಿನಗೋಸ್ಕರ ಜಾಮೂನು ತರ್ತೀನಿ" ಅಂತ ಹೇಳಿ ಹೊರಟೆ. ಮನಸಿನಲ್ಲಿ ಏನೋ ಸಂತೋಷ.. ಹುಡುಗನ ಆ ಕ್ಷಣದ ಹಸಿವನ್ನು ಶಮನ ಮಾಡಿದ ತೃಪ್ತಿ.. ಬೇಕರಿಯಲ್ಲಿ ಎರಡು ಜಾಮೂನು ಮತ್ತು ೧೦೦ ಗ್ರಾಂ ಖಾರಾ ಬೂಂದಿ ಕಟ್ಟಿಸಿಕೊಂಡೆ. ದುಡ್ಡು ಕೊಡಲೆಂದು ಹೆಗಲಿಗೆ ನೇತು ಹಾಕಿಕೊಂಡಿದ್ದ ಹ್ಯಾಂಡ್ ಬ್ಯಾಗ್... ಒಹ್ ಹ್ಯಾಂಡ್ ಬ್ಯಾಗನ್ನು ಕೆಫೆಯಲ್ಲೇ ಮರೆತು ಬಂದಿದ್ದೆ. ಬೇಕರಿಯವರಿಗೆ ಒಂದು ನಿಮಿಷಾ ಸಾರ್.. ಈಗ ಬರ್ತೀನಿ ಅಂತ ಕೆಫೆಗೆ ಬಂದೆ. ಆ ಹುಡುಗ ಅಲ್ಲೆಲ್ಲೂ ಕಾಣಲಿಲ್ಲ. ಬಹುಶ: ಕೈ ತೊಳೆಯಲು ಹೋಗಿರಬಹುದೆಂದುಕೊಂಡೆ. ಏನೋ ಅನುಮಾನ ಬಂದಂತಾಗಿ ತಕ್ಷಣ ನನ್ನ ಹ್ಯಾಂಡ್ ಬ್ಯಾಗ್ ಗಾಗಿ ಹುಡುಕಾಡಿದೆ. ಎಲ್ಲೂ ಕಾಣಲಿಲ್ಲ.. ಒಂದು ಕ್ಷಣ ಎದೆ ಧಸಕ್ಕೆಂದಿತು... ಆ ಹುಡುಗನ ಬಗ್ಗೆ ಇದ್ದ ಅನುಕಂಪ ಕಾಳಜಿ ಎಲ್ಲವೂ ಒಂದೇ ಕ್ಷಣದಲ್ಲಿ ಕರಗಿ ಹೋದವು. ವಾಸ್ತವತೆಯ ಮುಳ್ಳು ಚುಚ್ಚಿ ಎಚ್ಚರವಾಯಿತು. ತಟ್ಟೆಯಲ್ಲಿದ್ದ ಅರ್ಧಂಬರ್ಧ ಮಸಾಲೆ ದೋಸೆ ನನ್ನನ್ನು ಅಣಕಿಸುತ್ತಿತ್ತು.