ಸೋಮವಾರ, ಮೇ 10, 2010

ಅಮ್ಮಾ, ನಿನ್ನ ಎದೆಯಾಳದಲ್ಲಿ...








"ಅಮ್ಮಾ,  ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು..." 

ಬಿ.ಆರ್. ಲಕ್ಷ್ಮಣರಾವ್ ಅವರ ರಚನೆಯ ಈ ಗೀತೆ ಛಾಯಾ ಅವರ ಕಂಠ ಸಿರಿಯಲ್ಲಿ ಮಧುರವಾಗಿ ತೇಲಿಬರುತ್ತಿತ್ತು. ಎಂತಹ ಅರ್ಥಗರ್ಭಿತವಾದ ಭಾವಗೀತೆ ಅದು. ಕೇಳು ಕೇಳುತ್ತಿದಂತೆಯೇ ನಾನು ಅಮ್ಮನ ಬಳಿಗೆ ಹೋಗಿ ಬಿಟ್ಟಿದ್ದೆ. ನಮಗೆ ಎಷ್ಟೇ ಸಂತಸವಾದಾಗಲೂ ತುಂಬಾ ದುಃಖವಾದಾಗಲೂ ಮೊದಲು ಮನಸಿಗೆ ಬರುವುದು ಅಮ್ಮನೇ..  ಓಡಿಹೋಗಿ ಅವಳ ಬಳಿ ನಮ್ಮ ಸಂತೋಷ ಹಂಚಿಕೊಳ್ಳುತ್ತೇವೆ. ನಮ್ಮ ಸಂತೋಷ ನೋಡಿ ಆಕೆಯ ಆನಂದ ದುಪ್ಪಟ್ಟಾಗುತ್ತದೆ. ದುಃಖ ವಾದರೂ ಸರಿ ಅಮ್ಮನ ಮಡಿಲಿನಲ್ಲಿ ಮಲಗಿ ಎಲ್ಲ ಹೇಳಿಕೊಂಡಾಗ ಮನಸು ನಿರಾಳವಾಗುತ್ತದೆ. ಬಹುಶಃ ಅದಕ್ಕೆ ಹೇಳಿದ್ದಾರೇನೋ ದೇವರು ನಮಗೆ ಕೊಟ್ಟ ಅದ್ಭುತ ಕಾಣಿಕೆ ಅಂದ್ರೆ "ಅಮ್ಮ".

ಮದರ್'ಸ್  ಡೇ ಪ್ರಯುಕ್ತ ಅಮ್ಮನ ಬಗ್ಗೆ ಏನಾದರೂ ಬರೆಯಬೇಕೆನಿಸಿತು. ಸರಿ ಬರೆಯೋಣವೆಂದು ಪೆನ್ನು ಕೈಯಲ್ಲಿ ಹಿಡಿದರೆ ಅಮ್ಮನ ಬಗ್ಗೆ ಏನು ಬರೆಯಬೇಕು? ಏನೆಲ್ಲಾ ಬರೆಯಬಹುದು... ಎಷ್ಟುಬರೆದರೂ ಅದು ಕಡಿಮೆಯೇ.. ನನಗೆ ಸಾಧ್ಯವಾದಷ್ಟು ಬರೆದಿದ್ದೇನೆ.

ಸಾಮಾನ್ಯ ಮಧ್ಯಮ ವರ್ಗದ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ನನ್ನ ಅಮ್ಮ ಮದುವೆಯಾಗಿ ಬಂದಿದ್ದು ಕೂಡ ಮಧ್ಯಮ ವರ್ಗದ ಕುಟುಂಬಕ್ಕೆ. ನಾನು ಹುಟ್ಟಿದ ಮೂರು ನಾಲ್ಕು ವರ್ಷಗಳಲ್ಲಿ ಅತ್ತೆ ಮಾವ ಇಬ್ಬರನ್ನೂ ಕಳೆದುಕೊಂಡಳು. ಆಗ ಸ್ವಲ್ಪ ಕಷ್ಟವಿತ್ತೆಂದು ಹೇಳುತ್ತಿದ್ದಳು. ಅಮ್ಮನ ಪ್ರಪಂಚ ಬಹಳ ಚಿಕ್ಕದು. ಅವಳ ಪ್ರಪಂಚದಲ್ಲಿ ಅಪ್ಪ ನಾನು ಮತ್ತು ನನ್ನ ತಂಗಿ ಅಷ್ಟೇ. ಸದಾ ನಮ್ಮ ಬಗ್ಗೆಯೇ ಯೋಚಿಸುತ್ತಿದ್ದಳು. ನಾವು ಚಿಕ್ಕವರಿದ್ದಾಗ ಅಮ್ಮನೊಂದಿಗೆ ದಿನವೂ ದೇವರ ಪೂಜೆ ಮಾಡುತ್ತಿದ್ದೆವು. ಆಗ ಅಮ್ಮ ಹೇಳುತ್ತಿದ್ದ ಆರತಿಯ ಹಾಡುಗಳು ಅರಿವಿಲ್ಲದಂತೆಯೇ ನನ್ನ ಮನಸ್ಸಿನಲ್ಲಿ ರೆಕಾರ್ಡ್ ಆಗಿಬಿಟ್ಟಿವೆ. ರಾತ್ರಿ ಕೈತುತ್ತು ತಿನ್ನುತ್ತ ಕೇಳುತ್ತಿದ್ದ ಕಥೆಗಳನ್ನೆಲ್ಲಾ ನಿಜವೆಂದೇ ನಂಬಿದ್ದೆವು. ನಾನು ಒಂದನೇ ಕ್ಲಾಸಿನಲ್ಲಿ ಹಾಡಿನ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿದ್ದ ದಿನ ನಮ್ಮ ನೆರೆಹೊರೆಯವರಿಗೆಲ್ಲ ಹೇಳಿ ಅದೆಷ್ಟು ಖುಷಿ ಪಟ್ಟಿದ್ದು ನನಗಿನ್ನೂ ನೆನಪಿದೆ. ಇನ್ನು ನಾನು ಭೂಮಿಗೆ ಬಂದ ದಿನ ಅದೆಷ್ಟು ಖುಷಿ ಪಟ್ಟಿರಬಹುದು. ಬೇಸಿಗೆ ರಜೆ ಬಂದರೆ ಸಾಕು ಅಮ್ಮನೊಂದಿಗೆ ಸಂಡಿಗೆ ಇಡುವುದು, ಹಪ್ಪಳ ಮಾಡುವುದು, ಮುಂದಿನ ಕ್ಲಾಸಿನ ಪಾಠ ಗಳನ್ನ ಹೇಳಿಸಿಕೊಳ್ಳುವುದು, ಆಟ ಆಡುವುದು.. ಅಬ್ಬಾ!!! ಎಂಥ ಆನಂದದ ದಿನಗಳವು. ನನ್ನ ಬಾಲ್ಯವನ್ನು ಬಹಳ ಸುಂದರಗೊಳಿಸಿದ್ದಕ್ಕೆ ಅಮ್ಮ ನಿನಗೆ ಕೋಟಿ ಪ್ರಣಾಮಗಳು.  ಇಂತಿಪ್ಪ ಅಮ್ಮನ ಬಗ್ಗೆ ಎಷ್ಟು ಬೇಕಾದರೂ ಬರೆಯಬಹುದು. ನನ್ನ ಅಮ್ಮ ಶಿಸ್ತಿನ ವಿಷಯದಲ್ಲಿ ಮಾತ್ರ ಬಹಳ ಕಟ್ಟುನಿಟ್ಟು. ಸ್ವಲ್ಪ ತಪ್ಪು ಮಾಡಿದರೂ ಶಿಕ್ಷೆ ಖಂಡಿತಾ. ಆಗೆಲ್ಲ ಅಮ್ಮನನ್ನು ಬಯ್ದುಕೊಳ್ಳುತ್ತಿದ್ದೆ. ಆದರೆ ಆಕೆ ಹಾಗೆ ಮಾಡಿದ್ದರಿಂದಲೇ ನಾವೀಗ ಶಿಸ್ತಿನಿಂದ ಇರುವುದೆಂದು ಮನವರಿಕೆಯಾಗಿದೆ. ಅಮ್ಮನಿಗೆ ಯಾವಾಗಲು ನಮ್ಮ ಓದಿನ ಬಗ್ಗೆಯೇ ಚಿಂತೆ. . ಬಡತನದ ಕಷ್ಟಗಳನ್ನೆಲ್ಲ ಸಾಕಷ್ಟು ಅನುಭವಿಸಿದ್ದರಿಂದ ತನ್ನ ಮಕ್ಕಳಿಗೆ ಹಾಗಾಗಬಾರದೆಂದು ಸದಾ ಓದಲು ಪ್ರೇರೆಪಿಸುತ್ತಿದ್ದಳು  ಮನುಷ್ಯನನ್ನು ಹಣದಿಂದ ಸೋಲಿಸುವುದಕ್ಕಾಗದಿದ್ದರೂ ವಿದ್ಯೆಯಿಂದ ಖಂಡಿತಾ ಸೋಲಿಸಬಹುದೆಂದು ಹೇಳುತ್ತಿದ್ದಳು. ಚಿಕ್ಕವಯಸ್ಸಿನಲ್ಲಿ ಈ ಮಾತುಗಳೆಲ್ಲ  ನಮಗೆ ಅರ್ಥವೇ ಆಗುತ್ತಿರಲಿಲ್ಲ. ಅವಳು ಇದನ್ನೆಲ್ಲಾ ಹೇಳುವಾಗ ಗಂಭೀರವಾಗಿ ಕೇಳುತ್ತಿದ್ದೆವು ಅಷ್ಟೇ. ಆದರೆ ಪರೀಕ್ಷೆಯಲ್ಲಿ ಜಾಸ್ತಿ ಅಂಕ ಪಡೆದರೆ ಖುಷಿ ಪಡುತ್ತಾಳೆ ಎಂಬುದು ಮಾತ್ರ ನಮಗಾಗ ಗೊತ್ತಿದ್ದ ಸತ್ಯ. 5 ನೇ ಕ್ಲಾಸ್ ಮುಗಿಸಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಅಮ್ಮನಿಗೆ ನಾನೇನೋ ದೊಡ್ಡ ಗುರಿ ಸಾಧಿಸಿದಷ್ಟು ಆನಂದ. ನಾನು ಮನೆಯನ್ನು ಬಿಟ್ಟು ಬೋರ್ಡಿಂಗ್ ಸ್ಕೂಲ್ ಗೆ ಸೇರುವಾಗ ಅಮ್ಮ ಹೇಳಿದ್ದೊಂದೇ ಮಾತು ಗುರಿಸಾಧನೆಯ ಪ್ರಥಮ ಸೋಪಾನವಿದು, ಚೆನ್ನಾಗಿ ಓದು ನಾನು  ಯಾವಾಗಲು ನಿನ್ನೊಂದಿಗೆ ಇರುತ್ತೇನೆ ಅಂತ. ಆದರೆ ನನ್ನನ್ನು ಮನೆಯಿಂದ ಕಳಿಸುವಾಗ ಒಳಗೊಳಗೇ ಎಷ್ಟು ಬಿಕ್ಕಿದ್ದಳೋ ನನ್ನ ಎದುರು ಮಾತ್ರ ಬಹಳ ಕಾನ್ಫಿಡೆಂಟ್ ಆಗಿರುವಂತೆ ತೋರಿಸಿಕೊಳ್ಳುತ್ತಿದ್ದಳು. ಅವಳ ಕಣ್ಣುಗಳಲ್ಲಿ ದುಃಖ ಮಡುಗಟ್ಟಿತ್ತು. ಸ್ವಲ್ಪ ದಿನಗಳ ನಂತರ ಇಬ್ಬರೂ ಹೊಂದಿಕೊಂಡು ಬಿಟ್ಟೆವು.

ನಾನು SSLC ಮುಗಿಸಿದ  ನಂತರ ಯಾವ ಕಾಲೇಜಿಗೆ ಸೇರಬೇಕೆಂದು ಗೊಂದಲದಲ್ಲಿದ್ದೆ. ಆಗ ಹರಿಹರದ ಕಿರ್ಲೋಸ್ಕರ್ ಎಂಬೋ ಕಿರ್ಲೋಸ್ಕರ್ ಕಂಪನಿಯೇ ಬೀಗ ಮುದ್ರೆ ಜಡಿದುಕೊಂಡು ಕುಳಿತಿತ್ತು. ಅಪ್ಪನಂತೆಯೇ ಇತರ ಮೂರು ಸಾವಿರ ಜನರ ಬದುಕು ಅತಂತ್ರವಾಗಿಬಿಟ್ಟಿತ್ತು. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಕೂಡ ಅಮ್ಮ ಧೃತಿಗೆಡದೆ ನಿಭಾಯಿಸಿದಳು. hats off ಅಮ್ಮಾ..  ಅಷ್ಟೆಲ್ಲ ಕಷ್ಟ ಇದ್ದರೂ ಅದನ್ನು ತೋರಗೊಡದೆ ನಮ್ಮ ಓದಿಗೆಲ್ಲಿ ಅಡ್ಡಿಬರುತ್ತದೋ ಎಂದು ನನ್ನನ್ನು ಶಿವಮೊಗ್ಗೆಯ DVS ಗೆ ಸೇರಿಸಿದಳು. ನೀನು ಚೆನ್ನಾಗಿ ಓದಿದರೆ ಸಾಕು ಮನೆ ಮಾರಿಯಾದರೂ ನಿನ್ನ ಓದಿಸುತ್ತೇನೆ ಎಂದು ಹೇಳುತ್ತಿದ್ದಳು. ನಾನು ಓದುವಾಗ ವಯೋಸಹಜ ಆಸೆಯಿಂದ ಇಂಥದ್ದೇ ಬಟ್ಟೆ ಬೇಕು ಇಂಥದ್ದೇ ವಸ್ತು ಬೇಕೆಂದು ಹಠ ಹಿಡಿಯುತ್ತಿದ್ದೆ. ಇದರಿಂದ ಹುಟ್ಟುತ್ತಿದ್ದ ಕೀಳರಿಮೆಯನ್ನೆಲ್ಲ ಅಮ್ಮ ತನ್ನ ಮಾತುಗಳಿಂದ ಹೊಗಲಾಡಿಸುತ್ತಿದ್ದಳು.  ಜ್ಞಾನವಿಲ್ಲದ ಆಕಾಂಕ್ಷೆ ಲಗಾಮು ಇಲ್ಲದ ಕುದುರೆಯಿದ್ದಂತೆ ಎಂದು ಹೇಳಿ ನನ್ನ ಮನಸನ್ನು ಓದುವುದರ ಕಡೆಗೆ ತಿರುಗಿಸುತ್ತಿದ್ದಳು. ಮರುದಿನವೇ ಅದಮ್ಯ ಉತ್ಸಾಹದಿಂದ ನಾನು ಕಾಲೇಜಿಗೆ ಹೋಗಲು ತಯಾರಾಗಿರುತ್ತಿದ್ದೆ. ಅಮ್ಮ ತುಂಬಾ practical ಆಗಿ ಯೋಚನೆ ಮಾಡುತ್ತಿದ್ದಳು. ಮದುವೆ  ಅಥವಾ ಗಂಡ ಸಂಸಾರ ಎಂದು ಎಂದೂ ಬೋಧನೆ ಮಾಡಲಿಲ್ಲ. ನಾನು ಧೈರ್ಯದಿಂದ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕಬೇಕೆಂಬುದು ಅವಳ ಆಸೆ.  ಯಾವುದೋ ರಾಜಕುಮಾರ ಕುದುರೆಯಮೇಲೆ ಬಂದು ನಿನ್ನ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಕನಸು ಕಾಣಬೇಡ. ಜೀವನದಲ್ಲಿ ಎಂಥ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೋ ಗೊತ್ತಿಲ್ಲ. ಕನಸಿಗೂ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆಯೆಂದು ಹೇಳುತ್ತಿದ್ದಳು. ಸ್ವಲ್ಪ ಹಿಂಜರಿಕೆಯ ಸ್ವಭಾವದವಳಾದ ನನಗೆ ಟನ್ ಗಟ್ಟಲೆ ಧೈರ್ಯವನ್ನು ತುಂಬಿದ್ದಾಳೆ. ಎಲ್ಲ ವಿಷಯದಲ್ಲೂ ನನಗೆ ಆಧಾರವಾಗಿದ್ದಾಳೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾನು ಅಮ್ಮನನ್ನು ಕೇಳುತ್ತೇನೆ. ಆ ಕ್ಷಣಕ್ಕೆ ಅವಳು ಬಳಿಯಲ್ಲಿ ಇಲ್ಲದಿದ್ದರೆ ಮನಸ್ಸಿನಲ್ಲೇ ಅವಳಿಗೆ ಎಲ್ಲ ಹೇಳುತ್ತೇನೆ. ಏನೋ ಒಂಥರಾ ಸಮಾಧಾನ. ಕೋಪ ಬಂದಾಗ ಎಷ್ಟೋ ಸಲ ಅಮ್ಮನೊಂದಿಗೆ ಮುನಿಸಿಕೊಂಡಿದ್ದೇನೆ. ನಿನಗೇನೂ ಗೊತ್ತಾಗಲ್ಲ ಸುಮ್ನಿರಮ್ಮ ಅಂತ ಅವಳ ಮಾತನ್ನ ತಳ್ಳಿ ಹಾಕಿದ್ದರೂ  ಅಮ್ಮನಿಗೆ ಮಾತ್ರ ನನ್ನ ಕಂಡರೆ ಅದೆಷ್ಟು ಪ್ರೀತಿಯೋ ಹೇಳಲಾರೆ. ನನ್ನ ಮದುವೆ ನಿಶ್ಚಯವಾದ ಮೇಲೆ ಮಂಕಾಗಿರುತ್ತಿದ್ದಳು. ಮಗಳ ಮದುವೆಯೆಂಬ ಖುಷಿದ್ದರೂ ನಮ್ಮನ್ನ ಬಿಟ್ಟು ದೂರದ ದೇಶಕ್ಕೆ ಹಾರಿಬಿಡುತ್ತಾಳಲ್ಲ ಎಂಬ ಯಾತನೆ ತುಂಬಾ ಇತ್ತು. ಪ್ರಾಯಶಃ  ಈಗಲೂ ನನ್ನ ಬಗ್ಗೆಯೇ ಯೋಚಿಸುತ್ತಿದ್ದಾಳೆನೋ.. ನಾವು ಏನೇ ಮಾಡಿದರೂ ಪಾಪ ಅಮ್ಮ ಮಾತ್ರ ನಮ್ಮನ್ನು ಸಪೋರ್ಟ್ ಮಾಡೇ ಮಾಡುತ್ತಾಳೆ. ಅಮ್ಮನ ಪ್ರೀತಿಯೇ ಅಂಥದ್ದು. ಚಿಕ್ಕಂದಿನಲ್ಲಿ ಹೇಳುತ್ತಿದ್ದ ಪದ್ಯವೊಂದು ಬಿಟ್ಟು ಬಿಡದೆ ನನ್ನ ಕಾಡುತ್ತಿದೆ..

ಚೆಲುವೆಯಾರೋ ನನ್ನ ತಾಯಿಯಂತೆ
ಸತ್ಯಕ್ಕೆ ನೆಲೆಯಾದ ಒಲವಿನಂತೆ

ಕಣ್ಣೆರಡು ನಕ್ಷತ್ರ ಬಣ್ಣ ನೀಲಿ
ಕುಡಿನೋಟ ಹೊರಟಿತೂ ಮಿಂಚುತಾಳಿ
ಹಸಿರನುಡುವಳು ಅಮ್ಮ ಹರುಷದಲ್ಲಿ
ಉಸಿರಾಡುಳು ಮರುಗ ಮಲ್ಲಿಗೆಯಲ್ಲಿ

ಉದಯರವಿ ಹಣೆಗಿಟ್ಟ ಭಾಗ್ಯಬಿಂಬ
ಆಗಸದಾ ಕಪ್ಪು ಜಡೆ ಬೆನ್ನತುಂಬಾ
ಸಾಲು ಸೇರುವ ಹಸಿರು ಸಾಲು ಸಾಲೆ
ಸರವಾಗಿ ಮೆರೆಯುತಿದೆ ಎದೆಯ ಮೇಲೆ..

ಚೆಲುವೆಯಾರೋ ನನ್ನ ತಾಯಿಯಂತೆ
ಸತ್ಯಕ್ಕೆ ನೆಲೆಯಾದ ಒಲವಿನಂತೆ

ಹೌದು, ಅಮ್ಮನ ಚೆಲುವೆಯೇ.. ಅಮ್ಮನ ಚೆಲುವು ಅವಳ ಪ್ರೀತಿ ವಿಶ್ವಾಸ. ಅಮ್ಮನ ಎಲ್ಲ ಪ್ರೀತಿ ನನಗೆ ಸಿಗಬೇಕೆನ್ನುವ ಸ್ವಾರ್ಥ ನನ್ನದು. ಎಷ್ಟು ಪ್ರೀತಿ ಕೊಟ್ಟರೂ ನನಗೆ ಸಾಕೆನಿಸುವುದಿಲ್ಲ. ಅಮ್ಮನನ್ನು ನೆನಪಿಸಿಕೊಳ್ಳಬೇಕಿಲ್ಲ ಅವಳು ನಮ್ಮ ಹೃದಯದಲ್ಲೇ ಇದ್ದಾಳೆ. ಆದರೂ ಈ ಅಮ್ಮಂದಿರ ದಿನ ಅವಳು ನನ್ನೊಂದಿಗಿಲ್ಲದ್ದರಿಂದ ಮನಸು ಭಾರವಾಗಿದೆ. ಈ ದಿನ ನಿಂಗೆ ಮಾತು ಕೊಡ್ತಿದೀನಿ ಅಮ್ಮಾ.. ನನ್ನ ಬಗ್ಗೆ ನೀನು ಕಂಡ ಕನಸುಗಳನ್ನೆಲ್ಲ ಸಾಕಾರಗೊಳಿಸಿದ ಮೇಲೆ ನಿನ್ನೆದುರು ಬಂದು ನಿಲ್ಲುತ್ತೀನಿ.. ಆಗ ನಿನ್ನ ಕಣ್ಣಲ್ಲಿ ಜಗತ್ತನ್ನೇ ಗೆದ್ದ ಖುಷಿಯನ್ನ ಕಂಡೇ ಕಾಣುತ್ತೀನಿ love you amma love you so much .....