ಮಂಗಳವಾರ, ಜೂನ್ 22, 2010

ಆರಂಭ ಶೂರರು

ಇಂದು ಬೆಳಿಗ್ಗೆಯಿಂದ ಏನೋ ಒಂದು ಬಗೆಯ ಉತ್ಸಾಹ. ಎಲ್ಲ ಕೆಲಸಗಳನ್ನು ಸರಸರನೇ ಮುಗಿಸಿ ಹೊಸ ಚೈತನ್ಯದೊಂದಿಗೆ ಒಂದು ಹೊಸ ಕೆಲಸವನ್ನು ಕೈಗೆತ್ತಿಕೊಂಡಿದ್ದೆ. ನನ್ನ ಮನಸ್ಸೆಂಬ ಮನಸಾನಂದ ಸ್ವಾಮಿ ಯವರಿಂದ ಹೊಸ ದೀಕ್ಷೆ ಪಡೆದಿದ್ದೆ. ಏನೆಂದರೆ ಇನ್ನೆರಡು ವಾರಗಳ ಒಳಗೆ ಡ್ರೈವಿಂಗ್ ಟೆಸ್ಟ್ ಬರೆದು ಪಾಸಾಗುವುದು, ಪಾಸಾದರೆ ದೀಕ್ಷೆ ಪೂರ್ಣಗೊಂಡಂತೆ. ಈ ಗಡಿ ದಾಟುವುದರ ಒಳಗಾಗಿ ಗುರಿಯನ್ನು ತಲುಪಬೇಕೆಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದ್ದೆ. ಅದಕ್ಕಾಗಿ ಒಂದು ದಿನವನ್ನೂ ವ್ಯರ್ಥ ಮಾಡಬಾರದೆಂದು ೯೦ ಪುಟಗಳ ಚಾಲಕರ ಕೈಪಿಡಿಯನ್ನು ಹಿಡಿದು ಓದುತ್ತಾ ಕುಳಿತೆ. ಸುಮಾರು ಒಂದೆರೆಡು ಪುಟ ಓದಿರಬಹುದು ಮೇಲ್ ಚೆಕ್ ಮಾಡೋಣವೆಂದು  ಲ್ಯಾಪ್ಟಾಪ್ ತೆಗೆದೆ. ಅಂತಹ ಖಾಸ್ ಮೇಲ್ ಯಾವುದೂ ಬಂದಿರಲಿಲ್ಲ. ಸರಿ ಅಂತರ್ಜಾಲದಲ್ಲಿ ಅದೂ ಇದೂ ಹುಡುಕಾಡತೊಡಗಿದೆ. ಸ್ವಲ್ಪ ಸಮಯದ ನಂತರ ನಾನು ಓದುತ್ತಿದ್ದುದು ನೆನಪಾಗಿ ಚಾಲಕರ ಕೈಪಿಡಿಗಾಗಿ ತಡಕಾಡಿದೆ. ಕ್ಯಾಲಿಫೋರ್ನಿಯಾದ ಚಾಲನೆಯ ನಿಯಮಗಳಿಗೂ ಭಾರತದ ನಿಯಮಗಳಿಗೂ ಬಹಳ ವ್ಯತ್ಯಾಸವಿದೆ. ಆದ್ದರಿಂದ ತುಂಬಾ ಗಮನ ಕೊಟ್ಟು ಓದಬೇಕಾಗಿತ್ತು. ಅದೂ ಅಲ್ಲದೆ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ ಮಹಾನುಭಾವರೆಲ್ಲ ಹೆದರಿದವರ ಮೇಲೆ ಹಾವನ್ನು ಬಿಡುವ ಥರ ಟೆಸ್ಟ್ ತುಂಬಾ ಕಷ್ಟಕರವಾಗಿರುತ್ತದೆಂದು ಹೇಳಿದ್ದರು. ಈ ಎಲ್ಲ ಕಾರಣಗಳಿಗೆ ಅಚ್ಚುಕಟ್ಟಾಗಿ ಪೂರ್ವಸಿದ್ಧತೆಯನ್ನು ಮಾಡಬೇಕೆಂದಿದ್ದೆ. ಆದರೆ ಅದಮ್ಯ ಉತ್ಸಾಹದಿಂದ ಶುರು ಮಾಡಿದ ಕೆಲಸ ಸ್ವಲ್ಪ ಹೊತ್ತಿಗೆ ಕುಂಟುತ್ತಾ ಸಾಗಿತು. ಈ ದಿನ ಐದು ಪುಟಗಳಿಗಿಂತ ಜಾಸ್ತಿ ಓದಲು ಸಾಧ್ಯವಾಗಲೇ ಇಲ್ಲ ಎಂದುಕೊಳ್ಳುತ್ತಿರುವಾಗ ನನ್ನ ಇನ್ನೊಂದು ಮನಸ್ಸು 'ಇನ್ನೂ ಎರಡು ವಾರ ಇದೆಯಲ್ಲ ಓದಿದರಾಯ್ತು ಎಂದು ನನಗೇ ಸಮಾಧಾನ ಮಾಡಿತು. ಹೌದಲ್ಲವೇ ಎಂತಹ ದ್ವಂದ್ವ!!!


ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾಗಲೆಲ್ಲ  ಅಮ್ಮ ಆರಂಭಶೂರರು ಎಂದು ಹಾಸ್ಯಮಾಡುತ್ತಿದ್ದಳು. ಕೆಲಸದ ಆರಂಭದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಎನಿಸುವಷ್ಟು ಉತ್ಸಾಹ ತೋರಿಸಿ ಸ್ವಲ್ಪ ದಿನಗಳಲ್ಲೇ ಹೇಳ ಹೆಸರಿಲ್ಲದಂತೆ ಕೆಲಸಕ್ಕೆ ಗುಡ್ ಬೈ ಹೇಳುವವರೇ ಆರಂಭ ಶೂರರು.  ಆರಂಭ ಶೂರರಿಗೆ ಯಶಸ್ಸು ಗಗನ ಕುಸುಮ. ನಾನು ಕೂಡ ಆರಂಭ ಶೂರರ ಪಟ್ಟಿಗೆ ಸೇರುತ್ತೇನೆಯೇ? ಮನಸು ಜಾಗೃತವಾಯಿತು. ನನ್ನ ನಡವಳಿಕೆಗೆ ಏನು ಕಾರಣ? ನನ್ನ ಪಾಡಿಗೆ ನಾನೇ ಯೋಚಿಸಲು ಪ್ರಾರಂಭಿಸಿದೆ. ನಾನು ಯಾವ ಕೆಲಸವನ್ನೇ ಶುರು ಮಾಡಿದರೂ ಬಹಳ ಉತ್ಸಾಹದಿಂದ ಶುರುಮಾಡುತ್ತಿದ್ದೆ. ಆದರೆ ಒಂದೆರೆಡು ದಿನ ಅಷ್ಟೇ ಆಮೇಲೆ ಮೊದಲಿದ್ದ ಉತ್ಸಾಹ ಎಲ್ಲಿ ಹಾರಿ ಹೋಗುತ್ತಿತ್ತೋ ಗೊತ್ತಿಲ್ಲ. ಆ ಕೆಲಸದ ಮೇಲೆ ಆಸಕ್ತಿಯೇ ಇರುತ್ತಿರಲಿಲ್ಲ. ಅಷ್ಟೇ ಅಲ್ಲ ಈ ಕೆಲಸಕ್ಕಾಗಿ ನಾನು ಇಷ್ಟೊಂದು ಸಮಯ ವ್ಯರ್ಥ ಮಾಡಿದೆನೇ ಎಂದೆನಿಸುತ್ತದೆ. ಇಲ್ಲವೇ ಇದೇ ಕೆಲಸವನ್ನು ಹೇಗಾದರೂ ಮಾಡಿ ಪೂರ್ಣಮಾಡಿದ್ದರೆ ಯಶಸ್ವಿಯಾಗುತ್ತಿದ್ದೇನೋ ಏನೋ ಛೇ ಮಾಡಲಿಲ್ಲವಲ್ಲ ಎಂದು ಪರಿತಪಿಸಿದ್ದೂ ಉಂಟು.

ನಾನು ಕೆಲಸಕ್ಕೆ ಸೇರಿದ ಮೊದಲ ದಿನ ಬಹಳ ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಅಂದುಕೊಂಡಿದ್ದೆ. ಹಾಗೆ ನಡೆದುಕೊಳ್ಳುತ್ತಿದ್ದೆ ಕೂಡ. ಆದರೆ ಒಂದೆರೆಡು ತಿಂಗಳಾದಮೇಲೆ ಮ್ಯಾನೇಜರ್ ಗಳು ಕೊಡುತ್ತಿದ್ದ ಟಾರ್ಗೆಟ್ ಗಳು ಕೇಳಲೇ ತಲೆ ಸಿಡಿಯುತ್ತಿತ್ತು. ಇನ್ ಸೆ0ಟಿವ್ ಮತ್ತು ಬೋನಸ್ ಗಳು ಸಿಗಲಾರದ ಹುಳಿ ದ್ರಾಕ್ಷಿಯಂತಾದವು.  ಇಂಥ ಕ್ಲಿಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಿದ ಮೇಲಧಿಕಾರಿಗಳನ್ನು ಬೈದುಕೊಳ್ಳುತ್ತಾ ಕೆಲಸ ಮಾಡತೊಡಗಿದೆ. ಏನೇ ಆದರೂ ಸಂತೋಷದಿಂದ ಕೆಲಸ ಮಾಡ ಬೇಕೆಂದುಕೊಂಡಿದ್ದ ಪ್ರತಿಜ್ಞೆಯನ್ನು ಅದ್ಯಾವಾಗಲೋ ಮುರಿದುಬಿಟ್ಟಿದ್ದೆ.

ಮನಸು ಹಿಂದಕ್ಕೆ ಕರೆದುಕೊಂಡು ಹೋಯಿತು. ಕಾಲೇಜಿನ ಮೊದಲದಿನದಿಂದಲೇ ಚೆನ್ನಾಗಿ ಓದಬೇಕೆಂಬ ಹಂಬಲ. ಪಾಠ ಪ್ರವಚನಗಳು ಶುರುವಾಗುತ್ತಿದ್ದ ಹಾಗೆ ಸ್ವಂತ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು, ಗ್ರಂಥಾಲಯದಿಂದ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಂದು ಓದುವುದು ಹೀಗೆ ನಡೆದಿತ್ತು. ಇದೆಲ್ಲ ಶುರುವಾಗಿ ಒಂದು ತಿಂಗಳಾದರೂ ಆಗಿರಲಿಲ್ಲ ಕಾಲೇಜಿನ ವೆಲಕಾಮ್ ಪಾರ್ಟಿ ಫ್ರೆಷೆರ್ಸ್ ಪಾರ್ಟಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತೀ ಉತ್ಸಾಹ ತೋರಿಸುತ್ತಾ ಓದುವುದನ್ನು ಬದಿಗಿರಿಸಿಬಿಡುತ್ತಿದ್ದೆ. ಅಯ್ಯೋ ಪರೀಕ್ಷೆಗೆ ಒಂದು ವರ್ಷ ಸಮಯ ಇದೆ, ಈಗಲೇ ಯಾಕೆ ಕಷ್ಟಪಡೋದು ಅಂತ ಪ್ರಯತ್ನಕ್ಕೆ ಪೂರ್ಣವಿರಾಮ ಇಡುತ್ತಿದ್ದೆ. ದಿನಗಳುರುಳಿ ಪರೀಕ್ಷೆಗೆ ಒಂದು ತಿಂಗಳೋ ಹದಿನೈದು ದಿನವೋ ಇರುವಾಗ ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡುವುದು.  ಮೊದಲಿದ್ದ ಉತ್ಸಾಹವನ್ನು ವರ್ಷ ಪೂರ್ತಿ ಕಾಯ್ದುಕೊಳ್ಳದೆ ನಿರೀಕ್ಷಿಸಿದ ಫಲ ಕಾಣಲಾಗುತ್ತಿರಲಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಈ ತಪ್ಪು  ಮಾಡಬಾರದೆಂದು ಅಂದುಕೊಂಡರೂ ತಪ್ಪು ನಡೆದೇ ಹೋಗುತ್ತಿತ್ತು. ಈ ಅನುಭವ ಬಹಳ ಜನರಿಗೆ ಆಗಿರುತ್ತದೆ.

ಇದಷ್ಟೇ ಅಲ್ಲದೆ ನನ್ನ ಹಲವು ಅಭಿರುಚಿಗಳು ಅರಳುವ ಮುನ್ನವೇ ಬಾಡಿ ಹೋದ ಸಂಗತಿಗಳನ್ನು ತಿಳಿಸಲೇ ಬೇಕು. ಒಂದು ಬಾರಿ ನಮ್ಮ ಪರಿಚಯಸ್ಥರ ಮನೆಗೆ ಹೋದಾಗ ಅಲ್ಲಿ ಅವರ ಮಗಳು ಪೇಂಟಿಂಗ್ ಮಾಡುತ್ತಿದ್ದುದನ್ನು ನೋಡುತ್ತಿದ್ದಂತೆಯೇ ನನಗೂ ಕಲಿಯಬೇಕೆಂದೆನಿಸಿ ಅದರ ಬಗ್ಗೆ ಪೂರ್ವವಿಚಾರ ಮಾಡದೆ ಮರುದಿನವೇ ಥರಥರದ ಬಣ್ಣಗಳು, ವಿವಿಧ ಬ್ರಶ್ ಗಳು, ಕ್ಯಾನ್ವಾಸ್ ಫ್ರೇಮ್ ಎಲ್ಲ ತಂದಿಟ್ಟುಕೊಂಡೆ. ಮೊದಲ ಚಿತ್ರಬಿಡಿಸಿ ಬಣ್ಣ ತುಂಬುವಾಗ ಮನಸ್ಸೆಲ್ಲ ರಂಗು ರಂಗು. ಈ ಪ್ರಯೋಗವೆಲ್ಲ ಒಂದು ವಾರ ಕೂಡ ನಡೆಯಲಿಲ್ಲ ಪೇಂಟಿಂಗ್ ಸಾಮಗ್ರಿಗಳೆಲ್ಲ ಅಟ್ಟಹತ್ತಿದವು. ಸ್ವಾರಸ್ಯದ ಸಂಗತಿಯೆಂದರೆ ಟಿವಿ ಯಲ್ಲಿ  ಬರುತ್ತಿದ್ದ  ಸಂಗೀತದ ರಿಯಾಲಿಟಿ ಶೋಗಳನ್ನು ನೋಡಿ  ನನಗೂ ಸಂಗೀತ ಕಲಿಯಬೇಕೆನಿಸಿತು. ಗುರುಗಳನ್ನು ಹುಡುಕುವಮೊದಲೇ ಕೀಬೋರ್ಡ್ ತಂದಿಟ್ಟುಕೊಂಡೆ. ಗುರುಗಳು ಸಿಕ್ಕಿ ಒಂದೆರೆಡು ತಿಂಗಳು ಪಾಠಕ್ಕೆ ಸರಿಯಾಗಿ ಹೋದೆನೋ ಇಲ್ಲವೋ ಯಾಕೋ ಇದು ನನಗೆ ಒಗ್ಗುತ್ತಿಲ್ಲ ಎಂದು ಹೇಳಿ ಬಿಟ್ಟುಬಿಟ್ಟೆ.

ಇತ್ತೀಚೆಗೆ  ಬಾಯಿ ಚಪಲಕ್ಕೆ ಬಲಿಯಾಗಿ ಬಗೆಬಗೆಯ ತಿಂಡಿಗಳನ್ನು ತಿಂದು ತೂಕ ಹೆಚ್ಚಾಗಿದ್ದು ಗಮನಕ್ಕೆ ಬಂದೊಡನೆ ಕ್ಯಾಲೊರಿಗಳನ್ನು ಬರ್ನ್ ಮಾಡಲು ಅವರಿವರ ಸಲಹೆಯಂತೆ ಡಯಟ್ ಶುರು ಮಾಡಿದೆ. ರುಚಿ  ರುಚಿಯಾದ ಭಕ್ಷ್ಯಗಳು ಕಣ್ಣಿಗೆ ಬಿದ್ದರೂ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ಬರೀ ತರಕಾರಿಗಳನ್ನು ತಿನ್ನುವುದು. ಎರಡನೇ ದಿವಸಕ್ಕೆ ತೂಕ ನೋಡಿಕೊಂಡು ಅದರಲ್ಲಿ ಕೊಂಚವೂ ವ್ಯತ್ಯಾಸವಿಲ್ಲದಿದ್ದಾಗ ಎಷ್ಟು ಪಥ್ಯ ಮಾಡಿದರೂ ವ್ಯರ್ಥ ಪ್ರಯತ್ನವೆಂದು ಪಥ್ಯಮಾಡುವುದನ್ನೇ ನಿಲ್ಲಿಸಿದೆ. ಆಮೇಲೆ ಕೇಳಬೇಕೆ ಕನಸಿನಲ್ಲಿ ಕೂಡ ಕರಿದ ತಿಂಡಿಗಳ ಮೆರವಣಿಗೆ. ಸ್ವಲ್ಪ ದಿನಗಳಾದ ಮೇಲೆ ನನ್ನ ಆಪ್ತರೊಬ್ಬರು ಕೊಟ್ಟ ಯೋಗದ ಸಲಹೆ ಮನಸ್ಸಿಗೆ ತುಂಬಾ ಹಿಡಿಸಿತು. ಮನೆಯ ಹತ್ತಿರವೇ ಪತಂಜಲಿ ಯೋಗ ಹೇಳಿಕೊಡುತ್ತಾರೆ ಅದೂ ಉಚಿತವಾಗಿ ಎಂದು ಗೊತ್ತಾದೊಡನೆ ನಾಳೆಯೇ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಿಳಿಯುವೆನೇನೋ ಅನ್ನುವಷ್ಟು ಉತ್ಸಾಹ ತುಂಬಿಕೊಂಡು ಯೋಗ ತರಗತಿಗೆ ಸೇರಿಕೊಂಡೆ. ಸ್ವಲ್ಪ ದಿನಗಳಲ್ಲಿ ಮತ್ತದೇ ಆರಂಭ ಶೂರತ್ವವೆಂಬ ಸೋಂಕು ತಗುಲಿ ಯೋಗಕ್ಕೂ ಎಳ್ಳುನೀರು ಬಿಟ್ಟಿದ್ದಾಯ್ತು.

ಹೀಗೆ ನನ್ನ ಬಗ್ಗೆ ನಾನೇ ಯೋಚಿಸುತ್ತಿದ್ದ ಹಾಗೆ ಒಂದು ಸತ್ಯವಂತೂ ಅರಿವಾಯಿತು. ನನ್ನ ಈ ಅಭ್ಯಾಸದಿಂದಾಗಿ ನಾನು ಎಷ್ಟೋ ಅವಕಾಶಗಳಿಂದ ವಂಚಿತಳಾಗಿದ್ದೆ. ಪ್ರಾರಂಭದಿಂದ ಅಂತ್ಯದವರೆಗೂ ಅದೇ ಹುಮ್ಮಸ್ಸು ಮತ್ತು ತಾಳ್ಮೆಯಿಂದ ಕಲಿತಿದ್ದರೆ ಕಡೆ ಪಕ್ಷ ಒಂದು ವಿಷಯದಲ್ಲಾದರೂ ಪರಿಣಿತಿಯನ್ನು ಹೊಂದಬಹುದಿತ್ತು. ನನ್ನ ಮುಂದಿದ್ದ ಹತ್ತು ಹಲವು ದಾರಿಗಳಲ್ಲಿ ಹತ್ತು ಅಡಿಗಳಷ್ಟು ಕೂಡ ಮುಂದೆ ಹೋಗಲು ಸಾಧ್ಯವಾಗದಿದ್ದಕ್ಕೆ ಖಂಡಿತಾ ಬೇಸರವಿದೆ. ಒಂದೊಂದು ಅಡಿಯಷ್ಟು ಗುಂಡಿಯನ್ನು ಹತ್ತು ಕಡೆ ತೋಡುವುದರ ಬದಲು ಒಂದೇ ಕಡೆ ತೋಡಿದ್ದಿದ್ದರೆ ಯಶಸ್ಸೆಂಬ ನೀರು ಸಿಕ್ಕಿರುತ್ತಿತ್ತು. ಈ ಪ್ರಪಂಚದಲ್ಲಿ ನನ್ನದೇ ಮನಸ್ಥಿತಿಯವರು ಬಹಳಷ್ಟು ಜನ ಇರಬಹುದು. ಈ ಆರಂಭಶೂರತ್ವ ಅನ್ನುವುದು ಕೆಲವರ ದೌರ್ಬಲ್ಯ ಕೂಡ ಆಗಿರುತ್ತದೆ. ಯಾವ ಕೆಲಸವನ್ನೂ ಪೂರ್ತಿಯಾಗಿ ಮಾಡಲಾಗದೆ ಬೇರೆಯವರ ಯಶಸ್ಸನ್ನು ನೋಡಿ ಒಳಗೊಳಗೇ ಕರುಬುವುದೊಂದೇ ಅವರ ಮುಖ್ಯಕೆಲಸವಾಗಿ ಬಿಡುತ್ತದೆ. ಕ್ಷಣಾರ್ಧದಲ್ಲಿ  ನೂರಾರು ಮೈಲಿ ಮುಂದೆ ಓಡುವಂತಹ ತಂತ್ರಜ್ಞಾನದ ಯುಗದಲ್ಲಿ ನಾವು ಹೀಗಿದ್ದರೆ ಬದುಕಲು ಸಾಧ್ಯವೇ? ನಮ್ಮನ್ನು ನಾವು ಬದಲಾಯಿಸಿಕೊಳ್ಳದಿದ್ದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಕುರುಡರಂತಾಗುತ್ತೇವೆ. ನನ್ನಂತೆಯೇ ಆರಂಭ ಶೂರತ್ವದ ಸೋಂಕಿನಿಂದ ಬಳಲುತ್ತಿರುವ ಬಂಧುಗಳೇ ನಮ್ಮ ಕಣ್ಣಿಗೆ ನಾವೇ ಕಟ್ಟಿಕೊಂಡ ಬಟ್ಟೆಯನ್ನು ಬಿಚ್ಚೋಣ. ಆರಂಭ ಶೂರರೆಂಬ ಹಣೆ ಪಟ್ಟಿಯನ್ನು ಕಿತ್ತೆಸೆಯೋಣ. ಹತ್ತು ಕೆಲಸಗಲ್ಲಿ ತೋರಿಸುವ ಉತ್ಸಾಹವನ್ನು ಒಂದೇ ಕೆಲಸದಲ್ಲಿ ತೋರಿಸಿ ಯಶಸ್ವಿಯಾಗೋಣ.

ಈಗ ಸಧ್ಯಕ್ಕೆ ನನ್ನ ಮುಂದಿರುವ ಗುರಿಯೆಂದರೆ ಡ್ರೈವಿಂಗ್ ಕಲಿಯುವುದು. ಮೂರು ತಿಂಗಳ ಒಳಗೆ  ನಮ್ಮ ಕಾರನ್ನು ನಾನೇ ಸ್ವತಂತ್ರವಾಗಿ ಫ್ರೀ ವೇ ಗಳಲ್ಲಿ ಓಡಿಸುವುದು. ಈ ಗುರಿಯ ಸಾಧನೆಗಾಗಿ ನನ್ನೆಲ್ಲ ಉತ್ಸಾಹವನ್ನು ಒಟ್ಟುಗೂಡಿಸಿದ್ದೇನೆ. (ದಯವಿಟ್ಟು ಇದನ್ನು ಆರಂಭ ಶೂರತ್ವದ ಸೋಂಕಿನ ಪ್ರಥಮ ಹಂತವೆಂದು ಪರಿಗಣಿಸದಿರಿ!!) ನೀವೂ ಸಹ ನಿಮ್ಮ ಗುರಿಯ ಬಗ್ಗೆ ಚಿಂತಿಸಿ, ಮತ್ತು ಅದರಲ್ಲಿ ಯಶಸ್ವಿಯಾಗಿರೆಂದು ಹಾರೈಸುತ್ತೇನೆ.