ಗುರುವಾರ, ಮಾರ್ಚ್ 11, 2010

ಯಡಕುಮರಿಯ ಚಾರಣ


ಮುನ್ನುಡಿ: ಬ್ಲಾಗೊದಯದಲ್ಲಿ ನನ್ನ ಸವಿನೆನಪುಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದಹಾಗೆ ನನ್ನ ಯಡಕುಮರಿಯ ಚಾರಣದ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇನೆ. ಯಡಕುಮರಿ ಚಾರಣಿಗರಿಗೆ ಅತ್ಯಂತ ಪ್ರಿಯವಾದ ಜಾಗ. ಇದನ್ನು ಗ್ರೀನ್ ರೂಟ್ ವ್ಯಾಲಿ ಟ್ರೆಕ್ಕಿಂಗ್ ಅಂತಲೂ ಹೇಳುತ್ತಾರೆ.  ಸಕಲೇಶಪುರದಿಂದ ಸುಬ್ರಹ್ಮಣ್ಯದ ವರೆಗೂ ರೈಲ್ವೆ ಹಳಿಯ ಮೇಲೆ ನಡೆಯುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ರೈಲ್ವೆ ಮಾರ್ಗವು ಬಹಳಷ್ಟು ಸುರಂಗಗಳು ಹಾಗು ಸೇತುವೆಗಳಿಂದ ಕೂಡಿರುವುದೇ ಚಾರಣಕ್ಕೆ ಹೊರಡಲು ಪ್ರಮುಖ ಆಕರ್ಷಣೆ. ಈ ರೈಲ್ವೆ ಹಳಿಯಮೇಲೆ ಬರಿ ಗೂಡ್ಸ್ ಟ್ರೈನ್ ಮಾತ್ರ ಹೊರಡುತ್ತದೆ. ನಾವು ಹೋಗುವಾಗ ಪ್ಯಾಸೆಂಜರ್ ಟ್ರೈನ್ ಇನ್ನೂ ಹೊರಟಿರಲಿಲ್ಲ. ಹಳೆಯ ಟ್ರ್ಯಾಕನ್ನು ಸರಿಪಡಿಸುವ ಕೆಲಸ ನಡೆಯುತ್ತಿತ್ತು. ಬಹುಶಃ ಭೂಕುಸಿತದ ಭಯದಿಂದ ಈ ಹಳಿಯ ಮೇಲೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.  ನನ್ನ ನೆನಪಿನ ಬುತ್ತಿಗೆ ೨೦೦೭ ರಲ್ಲಿ ಈ ಚಾರಣ ಸೇರ್ಪಡೆಯಾಯಿತು. AIMS ಕಾಲೇಜಿನ ದಿನಗಳಲ್ಲೇ ಈ ಚಾರಣದ ಮೂರು ದಿನಗಳು ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂತಹವು. ನನ್ನ ಡೈರಿಯಲ್ಲಿ ಈ ಚಾರಣದ ಕುರಿತಾಗಿ ಬಹಳ ರಸವತ್ತಾಗಿ ಬರೆದಿದ್ದೆ. ಇದರಲ್ಲಿ ನಾವು ಚಾರಣ ಪೂರ್ವ ಮಾಡಿಕೊಂಡ ಸಿದ್ಧತೆ, ಚಾರಣ ಮಾಡಿದ ರೀತಿ, ಪಟ್ಟ ಪಾಡು, ಹರಟೆ ಎಲ್ಲ ಸೇರಿದೆ. ಯಡಕುಮರಿಗೆ ಚಾರಣ ಹೊರಡುವವರಿಗೆ ಇದು ಮಾರ್ಗದರ್ಶಿಯೂ ಆಗಬಲ್ಲದು. ಈ ಚಾರಣದ ಕಥೆಯನ್ನು ಓದುತ್ತಿರುವಾಗ ನಿಮಗೂ ನಿಮ್ಮ ಪ್ರವಾಸದ ಕಥೆ ನೆನಪಾಗಬಹುದು. ಈ ಪ್ರವಾಸ ಕಥನವನ್ನು ಓದುವಾಗ ಎಲ್ಲಿಯೂ ನಿಮಗೆ ಬೇಸರವಾಗುವುದಿಲ್ಲ.. ಓದುತ್ತಿದ್ದಂತೆಯೇ ನೀವು ಆ ಕಥೆಯ ಒಂದು ಭಾಗವೇ ಆಗಿದ್ದೀರೆನೋ ಎಂದು ಖಂಡಿತಾ ಅನಿಸುತ್ತದೆ. ನೀವು ಇದನ್ನು ಇಷ್ಟ ಪಡುತ್ತೀರೆಂಬ ಭರವಸೆಯೂ ನನಗಿದೆ. 

'ಯಡಕುಮರಿಯ ಚಾರಣ' ದ ಬಗ್ಗೆ ಬಹಳಷ್ಟು ಬಾರಿ ದಿನಪತ್ರಿಕೆಗಳಲ್ಲಿ ಓದಿದ್ದಿದೆ. ಬಹಳ ದಿನಗಳಿಂದಲೂ ಇಲ್ಲಿಗೆ ಚಾರಣಕ್ಕೆ ಹೊರಡುವ ಆಸೆ ಇದ್ದರೂ ಅದೂ ಕೈಗೂಡಿದ್ದು ಮಾತ್ರ ಆಕಸ್ಮಿಕ. ಅಪ್ಪಟ ಶಾಲೆಯಂತಿರುವ ನಮ್ಮ ಕಾಲೇಜಿನಲ್ಲಿ ದಸರಾ ಹಬ್ಬಕ್ಕಾಗಿ ಒಂದು ವಾರ ರಜೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಒಂದು ವಾ..ರ...?? ಒಂದು ವಾರವನ್ನು ಹೇಗೆ ಕಳೆಯಬಹುದು ಎಂದು ಲೆಕ್ಕ ಹಾಕುತ್ತಿರುವಾಗಲೇ ಪರಿ, ಅಶ್ವಿನ್, ಹರೀಶ್ ಟ್ಯುಶನ್ ನಲ್ಲಿ ಪಾಠ ಕೇಳದೆ ರಜವನ್ನು ಮಜವಾಗಿ ಕಳೆಯುವುದು ಹೇಗೆ ಎಂದು ಯೋಚಿಸುತ್ತಿದ್ದರು. ಸರಿ ಮೂರು ಜನರೂ ಸೇರಿ ಯಡಕುಮರಿಯ ಚಾರಣಕ್ಕೆ ಹೋಗೋಣ ಎಂದು ತೀರ್ಮಾನಿಸಿದರು. ಸ್ನೇಹಿತರ ವರ್ತುಲದಲ್ಲಿ ಇದು ಚರ್ಚೆಗೆ ಗ್ರಾಸವಾಯಿತಾದರೂ ಕೊನೆಗೆ ಚಾರಣಕ್ಕೆ ಹೊರಡುವುದೆಂದು ನಿಶ್ಚಯಿಸಲಾಯಿತು.ಸಮಯದ ಅಭಾವವಿದ್ದರೂ  ತರಾತುರಿ ತಯಾರಿ ಶುರುಮಾಡಿದೆವು. ಶನಿವಾರ ಅಂದರೆ  ತಾ.13 -10 -07 ರಂದು ಮನೆಯಲ್ಲಿ ಎಲ್ಲರೂ ಸೇರಿ ಸಾಮಾನಿನ ಲಿಸ್ಟ್ ಮಾಡಿಕೊಂಡೆವು. ನಾಳೆ ರಾತ್ರಿ ಹೊರಡುವುದಾಗಿ ಮಾತಾಡಿಕೊಂಡೆವು. ಹರೀಶ್ ಹೋಗಿ ಟಿಕೆಟ್ ಬುಕ್ ಮಾಡಿಸಿದ.

   14 /10 /07   -  ಭಾನುವಾರ
ನನಗೆ ವಹಿಸಿದ ಕೆಲಸದಂತೆ ಹಣ್ಣು ಹಂಪಲಗಳನ್ನು ತೆಗೆದುಕೊಂಡು ರಾತ್ರಿ 8 ಕ್ಕೆ ಪರಿಯ ಮನೆಗೆ ಹೋದೆ. ಅಲ್ಲಿ ಅವರಿನ್ನೂ ಸಾಮಾನು ಜೋಡಿಸಿಕೊಳ್ಳುತ್ತಿದ್ದರು. ನಾವೆಲ್ಲಾ ಅಂದರೆ ನಾನು, ರಶ್ಮಿ, ಚಂದ್ರಿಕಾ, ವಿಭಾ, ಪರಿ, ಅಶ್ವಿನ್, ಮುತ್ತು ಎಲ್ಲರೂ 250P ಬಸ್ನಲ್ಲಿ ಮೆಜೆಸ್ಟಿಕ್ ಗೆ ಹೊರಟೆವು. ಪರಿ ಹರೀಶ್ ಮನೆಗೆ ಹೋಗಿ ಅವನನ್ನು ಕರೆತರಬೇಕಾಗಿತ್ತು. 250P  ಬಸ್ ಅಲ್ಲವೇ? ಹೇಗಿದ್ದರೂ ದೇವಯ್ಯ ಪಾರ್ಕ್ ಮುಖಾಂತರ ಹೋಗುತ್ತದೆ. ಹರೀಶನ ಮನೆ ಬಸ್ ಸ್ಟಾಪ್ ಗೆ ಬಹಳ ಸಮೀಪವಿದ್ದುದರಿಂದ ಅಲ್ಲಿಯೇ ಪರಿಯನ್ನು ಇಳಿಸಿದರಾಯಿತು ಎಂದು ನಾನು ಯೋಚಿಸಿದ್ದೆ. ಆದರೆ ಚಾಲಕ ಮಾರ್ಗ ಬದಲಿಸಿ ರಾಜ್ಕುಮಾರ್ ರಸ್ತೆಯಿಂದ ಟರ್ನ್ ತಗೊಂಡ. ಈ ಮಧ್ಯ ಪರಿ 'ಸುಜಾತ' ಹತ್ತಿರ ಇಳಿದ. (ಅಲ್ಲ ನಾನು ಹೇಳಿ ಇಳಿಸಿದೆ!). ನಾವೆಲ್ಲಾ ಬಸ್ ಸ್ಟ್ಯಾಂಡ್ ನಲ್ಲಿ ಕಾಯುತ್ತಿದ್ದೆವು. ಚಂದ್ರಣ್ಣ 'ಮೆಟ್ರೋ' ಲಗೇಜಿನ ಸಮೇತ ಬಂದಿಳಿದ. ಹರೀಶ್ ಮತ್ತು ಪರಿ ಇನ್ನೂ ಬಂದೇ ಇರಲಿಲ್ಲ, ನಮಗೆಲ್ಲ ಆತಂಕ ಶುರುವಾಗಿತ್ತು. ಪರಿ ಮಹಾರಾಷ್ಟ್ರದ ನಾಗಪುರದವನಾಗಿದ್ದು ಬೆಂಗಳೂರಿನ ಪರಿಚಯ ಅವನಿಗೆ ಅಷ್ಟಾಗಿ ಇರಲಿಲ್ಲ. ಸಾಲದ್ದಕ್ಕೆ  ಎಲ್ಲೋ ಇಳಿಯಬೇಕಾಗಿದ್ದವನು  ಇನ್ನೆಲ್ಲೋ ಇಳಿದಿದ್ದ.  ಸರಿ ಅವರು ಬಂದ ಮೇಲೆ ಪರಿಯಿಂದ ನನಗೆ  ಮಂಗಳಾರತಿ ಆಯ್ತು. ಯಾಕೆಂದು ಬೇರೆ ತಿಳಿಸಬೇಕಿಲ್ಲ ಅಲ್ವಾ? ಎಲ್ಲವೂ ಸರಿಯಾಯ್ತು ಅನ್ನುವಷ್ಟರಲ್ಲಿ  ರಶ್ಮಿಯ ಕರಿಬ್ಯಾಗ್ ಕಿತ್ತ್ಕೊಂಡು ಹೋಯ್ತು. ಅದಕ್ಕೆ ಕಾರಣರಾದ ಮಹಾನುಭಾವರಿಗೆ ಹಿಡಿಶಾಪ ಹಾಕುತ್ತ ಹೊಸ ಬ್ಯಾಗ್ ಖರೀದಿಗೆಂದು ಹೊರಟರು. ನೂರಾಎಪ್ಪತ್ತು ರೂಪಾಯಿ ದಂಡ ತೆತ್ತು ಹೊಸ ಹಸಿರು ಬ್ಯಾಗ್ ತಂದೇಬಿಟ್ಟರು. ಹೊರಡುವ ಮೊದಲೇ ಇಷ್ಟೆಲ್ಲಾ ಅವಾಂತರಗಳು, ಮುಂದೇನೋ ಎಂದುಕೊಂಡೇ ಬಸ್ ಗಾಗಿ ಕಾಯುತ್ತಿದ್ದೆವು. ನಮ್ಮ ಬಸ್ ನಂಬರ್ ಅನ್ನು ಖಚಿತಪಡಿಸಿಕೊಂಡು ಬರಲು ಹರೀಶ್ ಹೋಗಿದ್ದ, ಬಂದವನೇ ತಡಬಡಾಯಿಸುತ್ತ 'ಎಂಬತ್ಮೂರು ಎಪ್ಪತ್ನಾಲ್ಕು' ಅಂದರೆ ಎಷ್ಟು ಎಂದ. ಕಾರಣ ಕೇಳಿದ್ದಕ್ಕೆ ಅದೇ ನಮ್ಮ ಬಸ್ ನಂ. ಎಂದು ಗೊತ್ತಾಯಿತು. ಕನ್ನಡದಲ್ಲಿ  ಹೇಳಿದ ಸಂಖ್ಯೆಯನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಿದಾಗಲೇ ಅವನಿಗೆ ಅರ್ಥವಾಗಿದ್ದು. ತಿಳಿಹಾಸ್ಯಕ್ಕೆ ಕಾರಣವಾಗಿದ್ದ ಈ ಪ್ರಸಂಗ ನಿಜಕ್ಕೂ ವಿಷಾದಕರವೇ. ಅಯ್ಯೋ ಕನ್ನಡವೇ... ಎಂದುಕೊಳ್ಳುತ್ತಿರುವಾಗ ನಮ್ಮ 8374 ನಂ. ಬಸ್ ಬಂದೇ ಬಿಟ್ಟಿತು. ನಮಗಾಗಿ ಕಾಯ್ದಿರಿಸಿದ್ದ ಆಸನಗಳನ್ನು ನಾವೂ ಅಲಂಕರಿಸಿಬಿಟ್ಟೆವು.  ಮುತ್ತು ಹೊತ್ತು ತರುತ್ತಿದ್ದ ಚೀಲವನ್ನು ನೋಡಿ ಕಂಡಕ್ಟರ್ ಅವನನ್ನು ಕೂಲಿಆಳೆಂದು ಕರೆದಾಗ ನಮಗೆಲ್ಲ ಹೊಟ್ಟೆ ಬಿರಿಯುವಷ್ಟು ನಗು. ಕಂಡಕ್ಟರ್ ಜೊತೆಗಿನ ಮಾತುಕತೆಯಲ್ಲಿ ದೋಣಿಗಲ್ ಗೆ  ಇರುವ ಮಾರ್ಗವನ್ನು ದುರಸ್ತಿಗಾಗಿ ನಿಲ್ಲಿಸಿದ್ದಾರೆಂದು ಗೊತ್ತಾಯಿತು. ಸಕಲೇಶಪುರದಿಂದ  ಬೇರೆ ವಾಹನಗಳು ಸಿಗುತ್ತವೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಅದೂ ಇದೂ ಮಾತಾಡುತ್ತ ಹಾಗೆಯೇ ನಿದ್ರೆಹೋದೆವು.

 

15 /10 /07 - ಸೋಮವಾರ

ಬೆಳ್ಳಂಬೆಳಿಗ್ಗೆ ನಾಲ್ಕುವರೆಗೆ ಸಕಲೇಶಪುರದಲ್ಲಿ ತನ್ನ ಒಡಲಿನಿಂದ ನಮ್ಮೆಲ್ಲರನ್ನೂ ಹೊರಹಾಕಿತು ನಂ.8374 ರ ಬಸ್. ಕಣ್ಣುಜ್ಜುತ್ತಾ ಆಚೀಚೆ ನೋಡುತ್ತಿರುವಾಗ ಹರೀಶ ಕಾಲೇಜಿನ ಉಪನ್ಯಾಸಕರಿಗಷ್ಟೇ ಅಲ್ಲದೆ ಬಸ್ ನ ಚಾಲಕನಿಗೂ 'ಬಕೆಟ್' ಹಿಡಿಯುತ್ತಿದ್ದುದನ್ನು ನೋಡಿ ನಗು ತಡೆಯಲಾಗಲಿಲ್ಲ. ಬಸ್ ನಿಲ್ದಾಣದಲ್ಲಿ ಎಲ್ಲರೂ ಟೀ ಕುಡಿದು ದೋಣಿಗಲ್ ಬಸ್ ಗಾಗಿ ಕಾಯುತ್ತಿದ್ದೆವು. ಅಲ್ಲಿಯ ವಾತಾವರಣ ಎಲ್ಲರಿಗೂ ಇಷ್ಟವಾಯಿತು. ಕ್ಯಾಮರಾಕ್ಕಂತೂ ಬಿಡುವೇ ಇರಲಿಲ್ಲ. 6.45 ಕ್ಕೆ  ಮಂಗಳೂರಿಗೆ ಹೋಗುವ ಬಸ್ ದೋಣಿಗಲ್ ಮಾರ್ಗವಾಗಿ ಹೋಗುವುದೆಂದು ಗೊತ್ತಾಯಿತು. ಪ್ರಾತಃಕಾಲದ ಕರ್ಮಗಳನ್ನೆಲ್ಲ ಮುಗಿಸಿಕೊಳ್ಳುವ ಹೊತ್ತಿಗೆ ಮಂಗಳೂರಿನ ಬಸ್ ಬಂತು. ದೋಣಿಗಲ್ ಗೆ ಸರಿಯಾದ ಮಾರ್ಗವಿರದ ಕಾರಣ ಅದಕ್ಕೆ ಸಮೀಪವಾಗುವ ಸ್ಥಳದಲ್ಲಿ ಚಾಲಕ ನಮ್ಮನ್ನಿಳಿಸಿದರು. ಸ್ಥಳೀಯರ ಸಲಹೆಯಂತೆ ಎಸ್ಟೇಟ್ ಅನ್ನು ಬಳಸಿಕೊಂಡು ರೈಲ್ವೆ ಟ್ರ್ಯಾಕ್ ತಲುಪಲು ದೌಡಾಯಿಸಿದೆವು. ಟ್ರ್ಯಾಕ್ ಸಿಕ್ಕ ತಕ್ಷಣ ಎಲ್ಲರೂ ಅಕ್ಷರಶಃ  ನೆಗೆದಾಡಿಬಿಟ್ಟೆವು. ನಮ್ಮ ಚಾರಣ ಶುರುವಾಗಿದ್ದೇ ಇಲ್ಲಿಂದ. ಹಳದಿ ಬೋರ್ಡಿನಲ್ಲಿ  (46 /600 ) ಎಂದು ನಮೂದಿಸಲಾಗಿತ್ತು. ಮೆಟ್ರೋ ಚೀಲ ಸಖತ್ ಭಾರವಾಗಿದ್ದುದರಿಂದ ಎಲ್ಲರಿಗೂ ಅದರಲ್ಲಿದ್ದ ವಸ್ತುಗಳನ್ನು ಹಂಚಲಾಯಿತು. ನಮ್ಮ ಬ್ಯಾಗುಗಳ ಹೊಟ್ಟೆಯಲ್ಲಿ ಮತ್ತೊಂದಿಷ್ಟು ಸಾಮಾನು ತುರುಕಿಸಿಕೊಂಡು ಹೊರಟೆವು. ಉತ್ಸಾಹ ಬಹಳ ಇದ್ದುದರಿಂದ ಲಗೇಜು ಭಾರ ಎನಿಸಲಿಲ್ಲ. ಮೊದಲ ಬಾರಿಗೆ ಬ್ರಿಡ್ಜ್ ಬಂದಾಗ ಥ್ರಿಲ್ ಆದೆವು. ನಾನು ರಶ್ಮಿ ಮೊದಲು ಬ್ರಿಡ್ಜ್ ಕ್ರಾಸ್ ಮಾಡಲು ಶುರುಮಾಡಿದೆವು. ಮಧ್ಯದಲ್ಲಿ ರಶ್ಮಿಗೆ ಭಯವಾಯಿತಾದರೂ ನಾನು ಅವಳು ಧೈರ್ಯ ಮಾಡಿ ಇನ್ನೊಂದು ತುದಿ ತಲುಪಿದೆವು. ಕೆಳಗೆ ನದಿ ಹರಿಯುತ್ತಿತ್ತು. ತಿಂಡಿ ತಿನ್ನಲು ಅದೇ ಪ್ರಶಸ್ತ ಸ್ಥಳವಾಗಿತ್ತು.   ಕಾಲುದಾರಿಯ ಸಹಾಯದಿಂದ ಕೆಳಗೆ ಹರಿಯುತ್ತಿದ್ದ ನೀರನ್ನು ತಲುಪಿದೆವು. ಆಟವಾಡುತ್ತ ತಿಂಡಿ(ಬ್ರೆಡ್) ತಿಂದೆವು. ಹೀಗೇ ನೀರಿನಲ್ಲಿ ಕಪಿಚೇಷ್ಟೆ ಮಾಡಿದ ಹರೀಶ ವಿಭಾಳ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ, ಪಾರ್ವತಿಯು ಶಿವನಿಂದ ಮುನಿಸಿಕೊಂಡು ತಪಸ್ಸಿಗೆ ಹೊರಟಂತೆ  ಇದ್ದಕ್ಕಿದ್ದಂತೆ ವಿಭಾ ಕಣ್ಮರೆಯಾಗಿಬಿಟ್ಟಳು. ಅವಳನ್ನು ಹುಡುಕುವುದೇ ದೊಡ್ಡ ರಂಪವಾಗುತ್ತದಲ್ಲ ಎಂದು ನಾವಂದುಕೊಳ್ಳುತ್ತಿರುವಾಗಲೇ ಹರೀಶ ಬಂದು " ಏ, ಹೋಗ್ರೆ ಹುಡುಕ್ರೀ ಎಲ್ ಹೋದ್ಲು ಅಂತ"  ನಮಗೆ ಈ ಹುಡುಕುವ ಕೆಲಸವನ್ನು ಹೇಳಿದ (ಕೈಲಾಗದವನಂತೆ!).  ನೀನೆ ಹುಡುಕು ಎಂದು ಧಮಕಿ ಹಾಕಿದ್ದಕ್ಕೆ ಅವನು ಕೊಟ್ಟ 'ಶೂ' ಕಾರಣವಂತೂ ತುಂಬಾ ಸಿಲ್ಲಿಯಾಗಿತ್ತು. ಬಹಳ ಸಿಟ್ಟಿನಿಂದ ನಾನು ರಶ್ಮಿ, ಚಂದ್ರಿಕಾ ಎಲ್ಲರೂ ಅವಳನ್ನು ಹುಡುಕಲು ಮತ್ತೆ ಗುಡ್ಡ ಹತ್ತಿದೆವು. ಒಂದರ್ಧ ಗಂಟೆ ಇದರಲ್ಲೇ ಕಳೆಯಿತು. ಕೊನೆಗೂ ವಿಭಾಳ ದರ್ಶನವಾಗಿ  ಎಲ್ಲರೂ ಬೈದು (ಮುಖಕ್ಕೆ ಉಗಿದು?) ಟ್ರ್ಯಾಕ್ ಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಾಯಿತು. ಆದಷ್ಟು ಬೇಗ ಹೊರಡಬೇಕೆನ್ನುವ ಆತುರವಿದ್ದರೂ ಎಲ್ಲರ ಸಹಕಾರವಿಲ್ಲದೆ ನಮ್ಮ ಚಾರಣ ಕುಂಟುತ್ತಾ ಸಾಗಿತು. ಹರೀಶ್-ವಿಭಾ ನಮ್ಮ ಬಾಯಿಗೆ ಆಹಾರವಾಗಿದ್ದರು. ನಾನಂತೂ ವಿಭಾಳ ಡೈಲಾಗ್  'ಏ, ಗಂದೆ ರುಕ್ ನಾ..' ಎಂದು ಪದೇ ಪದೇ ಹೇಳಿ ಅವಳ ತಲೆ ತಿನ್ನುತ್ತಿದ್ದೆ. ಮಧ್ಯಾಹ್ನ ನೀರು ಇರುವ ಜಾಗ ಎಲ್ಲೂ ಸಿಗದೇ ನಾವು ಸಂಜೆಯಾದರೂ ನಡೆಯುತ್ತಲೇ ಇರಬೇಕಾಯಿತು. ಮಾರ್ಗ ಮಧ್ಯೆ ಹಣ್ಣು ತಿನ್ನುತ್ತ ಬಂದುದರಿಂದ ಬಚಾವಾದೆವು. ಚಂದ್ರಿಕಾ ಅಂತೂ ಹಸಿವಿನಿಂದ ಬಾಯಿ ಒಣಗಿಸಿಕೊಂಡು  "ಹಸಿವಾಗ್ಲಿಕತದ" ಎಂದು ಪದೇ ಪದೇ ಹೇಳುವಾಗ ನಾವೆಲ್ಲ ಸೇರಿಕೊಂಡು ಅವಳ ಕಾಲೆಳೆಯುತ್ತಿದ್ದೆವು.  ಹಾಗೆಯೆ ಅವರಿವರನ್ನು ಲೇವಡಿ ಮಾಡುತ್ತ ಸಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿ ಒಂದಿಬ್ಬರು ಟ್ರ್ಯಾಕ್ ರಿಪೇರಿ ಮಾಡುತ್ತಿದ್ದರು. ಅವರು ಹೇಳಿದ ಪ್ರಕಾರ ಅಲ್ಲೇ ಕೆಳಗೆ ನೀರಿದ್ದ ಜಾಗಕ್ಕೆ ನಮ್ಮ ಗುಂಪು(ಗಾಂಪರ?) ಬಂದಿಳಿಯಿತು. ಸಂಜೆ ಸುಮಾರು ನಾಲ್ಕೂವರೆಗೆ ಚಂದ್ರಿಕಾ ಉಪ್ಪಿಟ್ಟು ಹಾಗು ಚಹಾ ತಯಾರಿಸಿದಳು. ತರಕಾರಿ ಹೆಚ್ಚಿಕೊಟ್ಟಿದ್ದೆಲ್ಲ ಚಂದ್ರಣ್ಣ(ವೆಂಕಟೇಶ್) ಬಿಡಿ... ಅಡುಗೆ ಮನೆಯ ಸೆಕ್ಷನ್ ಅನ್ನು ಚಂದ್ರಿಕಳ ಸುಪರ್ದಿಗೆ ಬಿಟ್ಟು ಕೊಟ್ಟೆವು.  ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾಗ ಮಣಿ ಎನ್ನುವವರ ಪರಿಚಯವಾಯಿತು. ನಾವು ಚಾರಣಕ್ಕೆ ಬಂದಿರುವುದೆಂದು ತಿಳಿದು ಈ ರಾತ್ರಿ ಅವರ ಮನೆಯಲ್ಲಿ ಉಳಿಯಲು ನಮಗೆ ಆಹ್ವಾನ ಕೊಟ್ಟರು. ಮುತ್ತು ಹೋಗಿ ಅವರ ಮನೆ ನೋಡಿಕೊಂಡು ಬಂದ. ನಾವು ಟೆಂಟ್ ಹಾಕಿಕೊಂಡು ಇರುವುದೆಂದು ತೀರ್ಮಾನಿಸಿದ್ದರೂ ಸುರಕ್ಷತೆಯ ದೃಷ್ಟಿಯಿಂದ ನಮ್ಮ ತೀರ್ಮಾನವನ್ನು ಬದಲಿಸಿದೆವು.  ರಾತ್ರಿ ಅಶ್ವಿನ್ ಮತ್ತು ಚಂದ್ರಿಕಾ ಪಲಾವ್ ತಯಾರಿಸಿದರು. ಊಟವಾದ ನಂತರ ಮನೆಯ ಹೊರಗಡೆ ಕ್ಯಾಂಪ್ ಫೈರ್ ಹಾಕಿ ಸುಟ್ಟ ಮುಸುಕಿನ ಜೋಳವನ್ನು ತಿನ್ನುತ್ತ ಬೆಂಕಿ ಕಾಯಿಸಿಕೊಂಡೆವು.

16/10/07  -  ಮಂಗಳವಾರ    

ನನಗೆ ಬೆಳಿಗ್ಗೆ ಬೇಗ ಎಚ್ಚರವಾಯಿತು ಸರಿ ಬೇಗ ಸ್ನಾನ ಮಾಡಿ ರೆಡಿ ಆಗುವುದೆಂದು ಹೊರಗೆಬಂದೆ. ನೀರು ಬಹಳ ತಣ್ಣಗಿತ್ತು. ಹಂಡೆ ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಿ ಕೊಳ್ಳುವಷ್ಟರಲ್ಲಿ ರಶ್ಮಿ ಬಂದಳು. ನಾವು ಬೇಗ ಸ್ನಾನ ಮುಗಿಸಿ ಬೇರೆಯವರಿಗೂ ಅನುಕೂಲವಾಗಲೆಂದು ಬೆಂಕಿ ಹಾಕಿದೆವು. ಚಂದ್ರಿಕಾ ಸ್ನಾನಕ್ಕೆ ಹೋಗಿ ಮುಕ್ಕಾಲು ಗಂಟೆಯಾದರೂ ಬರದಿದ್ದಾಗ ನೆಕ್ಸ್ಟ್ ಕ್ಯು ನಲ್ಲಿ ನಿಂತಿದ್ದ ಹರಿಶನಂತೂ ಕೆಂಡಾಮಂಡಲನಾಗಿದ್ದ. ಇದ್ಯಾವುದನ್ನೂ ಲೆಕ್ಕಿಸದೆ ನಾನು ಮತ್ತು ರಶ್ಮಿ ಕುಂಟಬಿಲ್ಲೆ ಆಡಲು ಆ ಮನೆಯ ಪುಟ್ಟ ಹುಡುಗಿಗೆ 'ಬಚ್ಚಾ' ತರಲು ಹೇಳಿದೆವು. ನಮ್ಮ ನಮ್ಮ ಬಚ್ಚಾ ಆರಿಸಿಕೊಂಡು ಆಟ ಆಡಿದೆವು.  ಮನೆಯ ಸುತ್ತಮುತ್ತ ಚೆನ್ನಾಗಿ ಓಡಾಡಿದೆವು. ಬೆಳಗಿನ ಉಪಹಾರಕ್ಕಾಗಿ ನೂಡಲ್ಸ್ ಮಾಡಿದ್ದರು. ಪಾಪ ಅಶ್ವಿನ್ ಉಪವಾಸವಿದ್ದುದರಿಂದ ಏನನ್ನು ತಿನ್ನಲೇ ಇಲ್ಲ ಒಂದು ಲೀಟರ್ ಹಾಲು ಮಾತ್ರ ಕುಡಿದ!  ನಾವೆಲ್ಲಾ ಸಿದ್ಧವಾಗುವ ಹೊತ್ತಿಗೆ ಮಧ್ಯಾಹ್ನ  12 .30 ಆಗಿತ್ತು. ಸರಿ ಎಲ್ಲರೂ ಗೊಣಗುತ್ತಾ ಮತ್ತೆ ಟ್ರ್ಯಾಕ್ ಗೆ ಬಂದೆವು. 54 /400 ರಿಂದ ನಮ್ಮ ಮುಂದಿನ ಪಯಣ ಶುರುವಾಯಿತು. ಮುಂದೆ ಕಡಗರವಳ್ಳಿಯ ಸ್ಟೇಷನ್ ನಲ್ಲಿ ಉಳಿದುಕೊಳ್ಳುವುದೆಂದು  ನಿರ್ಧರಿಸಿದೆವು. ನಡೆಯುತ್ತಾ ಹೋದಂತೆ ಯಾಕೋ ಲಗೇಜು ತುಂಬಾ ಭಾರವೆನಿಸುತ್ತಿತ್ತು. ಅಲ್ಲಲ್ಲಿ ವಿರಮಿಸಿಕೊಳ್ಳುತ್ತಾ ಸಾಗಿದೆವು.  ಮೊದಲ ಸುರಂಗ ಸಿಕ್ಕಾಗ ನಿಧಿಸಿಕ್ಕಷ್ಟೇ ಸಂತೋಷದಿಂದ ಕಿರುಚಿಬಿಟ್ಟೆವು. ನಂತರ ಬರೀ ಬ್ರಿಡ್ಜ್ ಮತ್ತು ಟನಲ್ ಗಳನ್ನೂ ನೋಡಿ ನೋಡಿ ಅಭ್ಯಾಸವಾಯಿತು.. ಸುರಂಗದ ಗೋಡೆಯ ಮೇಲೆ ಚಾಕ್ ಪೀಸ್ ನಿಂದ ನಮ್ಮ ಹೆಸರುಗಳನ್ನು ಬರೆದು ಬರೆದು ಬಹಳ ಸಂಭ್ರಮಪಟ್ಟೆವು. CCD ಎನ್ನುವ ಕೋಡ್ ಉಪಯೋಗಿಸಿ ಪರಸ್ಪರ ಹಾಸ್ಯ ಮಾಡುತ್ತಿದ್ದೆವು. ಅಲ್ಲಿನ ಪ್ರಾಕೃತಿಕ ಸೌಂದರ್ಯವಂತೂ ಬಣ್ಣಿಸಲು ಸಾಧ್ಯವೇ ಇಲ್ಲ. ಬೆಟ್ಟಗಳಂತೂ ಹಸಿರು ಮಕಮಲ್ ಬಟ್ಟೆಯನ್ನು ಹೊದ್ದು ಕುಳಿತಂತೆ ಕಾಣುತ್ತಿದ್ದವು. ಅಲ್ಲಿನ ವಾತಾವರಣ ಬೇಂದ್ರೆ ಕಾವ್ಯದಲ್ಲಿನ ಶ್ರಾವಣವನ್ನು ನೆನಪಿಸುತ್ತಿದ್ದವು. ಕಂಡ ಕಂಡಲ್ಲಿ ಫೋಟೋ ತೆಗೆಯುತ್ತಿದ್ದ ಅಶ್ವಿನ್ ನಲ್ಲಿ ಉದಯೋನ್ಮುಖ ಕ್ಯಾಮರಾಮನ್ ಆಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳು ಕಾಣುತ್ತಿದ್ದವು. ಇದೆಲ್ಲದರ ಮಧ್ಯ ಪರಿತೊಷ ನ  ಹರಿದ ಪ್ಯಾಂಟು ಉಚಿತ ಮನರಂಜನೆಗೆ ಕಾರಣವಾಗಿತ್ತು. ಈ ಹಳಿಯ ಮೇಲೆ 1975 ರಲ್ಲಿ ನಿರ್ಮಿತವಾದ ಹನ್ನೊಂದನೇ ಟನಲ್ 583 ಮೀ ಉದ್ದವಿದ್ದು ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ಅತಿ ಉದ್ದದ ಟನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಆಮೇಲೆ ಸಿಕ್ಕ ವಕ್ರ ವಕ್ರವಾಗಿದ್ದ ರಾಮಸ್ವಾಮಿ ಸೇತುವೆ ನಮ್ಮೆಲ್ಲರಿಗೂ ಬಹಳ ಇಷ್ಟವಾಯಿತು. ಚಂದ್ರಣ್ಣನ ಚಾರ್ಜ್ ಬ್ಯಾಟರಿಯ ಸಹಾಯದಿಂದ ನಿರಾಯಾಸವಾಗಿ ಟನಲ್ ಗಳನ್ನು ಕ್ರಾಸ್ ಮಾಡುತ್ತಿದ್ದೆವು. ಕಡಗರವಳ್ಳಿಯ ಸ್ಟೇಶನ್  ತಲುಪಿದಾಗ ಕೇವಲ 3 .30  ಮಾತ್ರ ಆಗಿತ್ತು. ಅಲ್ಲಿ ಉಳಿದು ಬಸ್ ಮುಖಾಂತರ ಸುಬ್ರಹ್ಮಣ್ಯಕ್ಕೆ ಹೋಗುವುದೆಂದೂ, ಯಡಕುಮರಿ ಕ್ಯಾನ್ಸಲ್ ಮಾಡುವುದೆಂದೂ ಒಮ್ಮತಕ್ಕೆ ಬರಲಾಯಿತು. ಇದರಿಂದ ನನಗೆ ನಿರಾಸೆ ಆಯಿತಾದರೂ ಎಲ್ಲರು ಹೇಳಿದಂತೆ ಕೇಳಲೇಬೇಕಲ್ಲವೇ? ಮತ್ತೆ ಮನಸು ಬದಲಿಸಿದ ಪರಿ ಇಂದೇ ಯಡಕುಮರಿಗೆ ಹೋಗುವುದೆಂದೂ ಕಡಗರವಳ್ಳಿಯಲ್ಲಿ ಉಳಿಯುವುದು ಬೇಡವೆಂದೂ ತಿಳಿಹೇಳಿದ. ಅವನ ಮಾತಿನಂತೆ ನಾವು ಸರಸರನೆ ಹೆಜ್ಜೆ ಹಾಕಲು ಶುರು ಮಾಡಿದೆವು. ನಾವು ಎಷ್ಟೇ ದೂರ ನಡೆದರೂ ಯಡಕುಮರಿಯ ಸ್ಟೇಷನ್ ಸಿಗಲೇ ಇಲ್ಲ. ಸೂರ್ಯ ದೂರದ ಗುಡ್ಡದಲ್ಲಿ ಲೀನವಾಗುತ್ತಿದ್ದಂತೆ ಎಲ್ಲಿ ಕತ್ತಲಾಗಿಬಿಡುತ್ತದೋ ಎಂಬ ದಿಗಿಲು ಎಲ್ಲರಿಗಿತ್ತು. ಜೊತೆಗೆ ಮಳೆ ಬರುವ ಹಾಗೆ ಮೋಡಕವಿದ ವಾತಾವರಣವಿತ್ತು. ನನಗಂತೂ ಸ್ಟೇಷನ್ ಯಾವಾಗ ಸಿಗುವುದೋ ಎಂಬಂತಾಗಿತ್ತು. ಸುಬ್ರಹ್ಮಣ್ಯನಿಗೆ ಹರಕೆ ಕಟ್ಟಿಕೊಂಡು ಧೈರ್ಯವಾಗಿ ಹೊರಟೆವು. ಸಿಗ್ನಲ್ ಲೈಟ್ಸ್ ಕಂಡ ತಕ್ಷಣ ತುಸು ಸಮಾಧಾನವಾಯಿತು. ಮತ್ತೆ ಸುಮಾರು ಒಂದು ಕಿ.ಮೀ. ನಡೆಯುವ ಹೊತ್ತಿಗೆ ಟ್ಯೂಬ್ ಲೈಟ್ ಬೆಳಕು ಕಾಣಿಸಿತು. ಪ್ಲಾಟ್ ಫಾರಂ ನೋಡುತ್ತಿದ್ದಂತೆ ಕಣ್ಣಾಲಿಗಳು ತುಂಬಿಕೊಂಡವು. ದೇವರಿಗೆ ಮನದಲ್ಲೇ ಧನ್ಯವಾದ ಅರ್ಪಿಸಿ ಮೇಲೆ ಹತ್ತಿದೆವು. 67/300 ರಲ್ಲಿ ನಮಗೆ ಯಡಕುಮರಿ ಸಿಕ್ಕಿತ್ತು. ಸ್ಟೇಷನ್ ಮಾಸ್ಟರ್ ಮುಂಗೊಪಿಯಾಗಿದ್ದರಿಂದ ನಾವು ಅವನಿಂದ ಉಗಿಸಿಕೊಳ್ಳದೆ ಬೇರೆ ವಿಧಿಯಿರಲಿಲ್ಲ. ನಾವು ಏನೂ ಎದುರು ಮಾತಾಡದೆ ಪ್ಲಾಟ್ ಫಾರಂ ಮೇಲೆ ಸುಧಾರಿಸಿಕೊಳ್ಳುತ್ತಿರುವಾಗ ಬಿಹಾರ್ ಮೂಲದ ಯುವಕರು ನಮಗೆ ಇರಲು ಸ್ಥಳ ತೋರಿಸಿದರು. ಅಲ್ಲಿ ಸೂಪ್ ಹಾಗು ಪಲಾವ್ ತಯಾರಿಸಿ ತಿಂದೆವು. ರಾತ್ರಿ  ಸರದಿ ಪ್ರಕಾರ ಕಾವಲು ಇರುವುದೆಂದೂ, ನಾನು ಚಂದ್ರಣ್ಣ ಹಾಗು ಮುತ್ತು ಮೊದಲು ಡ್ಯೂಟಿ ಶುರು ಮಾಡಿದೆವು. 3.30 ಕ್ಕೆ ವಿಭಾ ಹರೀಶ್ ರನ್ನು ಎದ್ದೇಳಿಸುವುದೆಂದು ಅಂದುಕೊಂಡೆ. ಸಮಯ ಕಳೆಯಲು ಮುತ್ತು ಮಿಲನ ಚಿತ್ರದ ಕಥೆ ಹೇಳಿ ನಮ್ಮ 60 ರೂ ಉಳಿಸಿದ. ಚಂದ್ರಣ್ಣ ನಂತೂ ತಲೆಕೆಟ್ಟು ಮಲ್ಕೊಂಡು ಬಿಟ್ಟ. ಟೈಮ್ ನೋಡಿದಾಗ ಆಗಲೇ ನಾಲ್ಕಾಗಿತ್ತು. ಮುಂದಿನ ಪಾಳಿಯ ವಿಭಾ ಹರೀಶ ರಿಗೆ ಕೆಲಸ ಒಪ್ಪಿಸಿ ನಾವು ಮಲಗಿದೆವು.

17 /10 /07  - ಬುಧವಾರ

ಬೆಳಿಗ್ಗೆ ಕಣ್ಣು ಬಿಟ್ಟಾಗ 7.30 ಆಗಿತ್ತು. ಅಷ್ಟರಲ್ಲಾಗಲೇ ಚಂದ್ರಿಕಾ ಮತ್ತು ಅಶ್ವಿನ್ ಒಂದು ರೌಂಡ್ ಫೋಟೋ ಸೆಶನ್ ಮುಗಿಸಿದ್ದರು. ಗೂಡ್ಸ್ ಗಾಡಿಯಲ್ಲಿ ಹತ್ತು ಗಂಟೆಗೆ ಸುಬ್ರಹ್ಮಣ್ಯಕ್ಕೆ ಹೋಗುವುದೆಂದು ನಿಶ್ಚಯವಾಯಿತು. ಗೂಡ್ಸ್ ಗಾಡಿಯವರು ನಮ್ಮನ್ನು ಹತ್ತಿರಕ್ಕೂ ಸೇರಿಸಲಿಲ್ಲ. ಇಷ್ಟರಲ್ಲಿ ಡೌನ್ಲೋಡ್ ಮಾಡಲು ಸೂಕ್ತ ಸ್ಥಳ ಸಿಗದೇ ರಶ್ಮಿ ಪರದಾಡಿದ್ದಂತೂ ನಗು ಬರುವಂತಿತ್ತು. ಸ್ವಲ್ಪ ಸಮಯದ ನಂತರ ನಮ್ಮೆಲ್ಲರದೂ ಅದೇ ಗತಿಯಾಯಿತಾದರೂ ವಿಧಿಯಿಲ್ಲದೇ ಹಾಗೆ ಹೋಗುವುದೆಂದುಕೊಂಡೆವು. ಅಲ್ಲಿ ಇದ್ದವರ ಸಲಹೆಯಂತೆ ನಾವು ವಾಪಸ್ ಸಕಲೇಶಪುರಕ್ಕೆ ಹೋಗುವುದೋ ಅಥವಾ ಸುಬ್ರಹ್ಮಣ್ಯಕ್ಕೆ ಹೋಗುವುದೋ ಎಂಬ ದ್ವಂದ್ವದಲ್ಲಿ ಬಿದ್ದೆವು. ಹೊಂಗರಹಳ್ಳಿಯ ದಾರಿಯನ್ನು ಹೇಳಿದರಾದರೂ ಅದು ಅವರಿಗೆ ಪರಿಚಿತವಿಲ್ಲ ಎಂದರು. ನಾವು ಹೋದರೆ ಹೊಂಗರಹಳ್ಳಿಯಿಂದ ಸಕಲೇಶಪುರಕ್ಕೆ ಮಾತ್ರ ಬಸ್ ಸಿಗುತ್ತದೆ ಆದರೆ ಸುಬ್ರಹ್ಮಣ್ಯಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದರು. ಅದೂ ಅಲ್ಲದೆ ಹೊಂಗರಹಳ್ಳಿಯ ದಾರಿ ಕಾಡಿನ ಮಧ್ಯೆ ಹಾದು ಹೋಗುವುದರಿಂದ ಅಷ್ಟು ಸುರಕ್ಷಿತವಲ್ಲ ಎಂದು ನಾವೇ ತೀರ್ಮಾನಿಸಿದೆವು. 80/200 ರಲ್ಲಿ  ಬಲಕ್ಕೆ ತಿರುಗಿದರೆ ಕಾಲುದಾರಿ ಇದೆ ಅಲ್ಲಿ ನಾಲ್ಕು ಕಿ.ಮೀ. ನಡೆದು ಗುಂಡ್ಯಕ್ಕೆ ಹೋದರೆ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಬಸ್ ಸೌಕರ್ಯವಿದೆ  ಎಂದರು.  ಸರಿ ಮತ್ತದೇ ನೂಡಲ್ಸ್ ತಿಂದು ಹೊರಡಬೇಕೆನ್ನುವಷ್ಟರಲ್ಲಿ ಪರಿ 'ಪಟಾಕ ಫೋಡಿ'ದ್ದರಿಂದ ಅಲ್ಲೊಂದು ಹಾಸ್ಯ ಸೃಷ್ಟಿಯಾಯಿತು. ನಾವೆಲ್ಲಾ ಮತ್ತೆ ಅದೇ ಸ್ಪೂರ್ತಿಯಿಂದ ಹೆಜ್ಜೆ ಹಾಕಿದೆವು. ಸುರಂಗದಲ್ಲಿ ಬರುತ್ತಿದ್ದ ಬಾವಲಿಗಳ ಕೆಟ್ಟ ವಾಸನೆಗೆ ನಮ್ಮ ಮೂಗು ಒಗ್ಗಿಹೋಗಿತ್ತು. ಸಾಲದ್ದಕ್ಕೆ ಜಿಗಣೆಗಳ ಕಾಟ. ಕಾಲು ಕಾಲಿಗೆ ತೊಡರಿ ಕೊಳ್ಳುತ್ತಿದ್ದ ಒಂದೆಲಗದ ಬಳ್ಳಿಯಿಂದ ರೋಸಿ ಹೋಗಿದ್ದೆವು. ಸ್ವಲ್ಪ ಸಮಯದಲ್ಲಿ ಟ್ರಾಲಿಯೊಂದು ಅದೇ ಮಾರ್ಗವಾಗಿ ಬಂತು. ಅವರು ನಮ್ಮನ್ನು ಕಂಡೊಡನೆ ನಿಲ್ಲಿಸಿ ನಮಗೂ ಅದರಲ್ಲಿ ಸ್ಥಳಾವಕಾಶ ಮಾಡಿ ಕೊಟ್ಟರು. ರಶ್ಮಿಯ 'ಟ್ರಾಲಿ ಸವಾರಿಯ' ಕನಸು ಇದೀಗ ನನಸಾಗಿತ್ತು. ಟ್ರಾಲಿಯಲ್ಲಿ ಎಂಟು ಕಿ.ಮೀ ಸವಾರಿ ಮಾಡಿದೆವು. 80 /200 ರಲ್ಲಿ ನಮ್ಮನ್ನಿಳಿಸಿದ ಟ್ರಾಲಿ ಭರ್ ಎಂದು ಸಾಗಿತು. ಸಿರಿಬಾಗಿಲಿಗೆ ಹೋಗುತ್ತಿದ್ದ ಒಬ್ಬ ತಾತನನ್ನು ಗುಂಡ್ಯದ ದಾರಿಯ ಬಗ್ಗೆ ಕೇಳಿದಾಗ ಅವರು ಅದಕ್ಕಿಂತಲೂ ಸಮೀಪದ ದಾರಿ ತೋರಿಸುವೆನೆಂದು ನಮ್ಮನ್ನು ಕರೆದೊಯ್ದರು. ನನ್ನ ಬ್ಯಾಗ್ ಹರಿದು ನನಗಂತೂ ಅದನ್ನು ಹಿಡಿದುಕೊಂಡು ಬರುವುದೇ ಹರಸಾಹಸವಾಯಿತು. 83 /100 ರಲ್ಲಿ ಒಂದು ದೊಡ್ಡ ಬ್ರಿಡ್ಜ್ ಇತ್ತು ಆದರೆ ನಮಗೆ ಅಲ್ಲೇ ಎಡಕ್ಕೆ ತಿರುವು ತೆಗೆದುಕೊಳ್ಳ ಬೇಕಿದ್ದುದರಿಂದ ಆ ಬ್ರಿಡ್ಜ್ ಕ್ರಾಸ್ ಮಾಡುವ ಅವಕಾಶ ಸಿಗಲಿಲ್ಲ. ನಾವು ಚಾರಣದಲ್ಲಿ ಒಟ್ಟು 38 ಸುರಂಗಗಳನ್ನೂ ಹಾಗು ಸುಮಾರು ಐವತ್ತು ಬ್ರಿಡ್ಜ್ ಗಳನ್ನೂ ದಾಟಿದ್ದೆವು. ಆದರೂ ಈ ಬ್ರಿಡ್ಜ್ ಮೇಲೆ ಬರಲು ಸಾಧ್ಯವಾಗದಿದ್ದಕ್ಕೆ ಸ್ವಲ್ಪ ಬೇಸರವಾಯಿತು. ನಾವು ಕಾಡಿನ ಕಾಲುದಾರಿ ಹಿಡಿದು ನಡೆದೆವು. ಹೋಗುವಾಗ ಶೂ ನಲ್ಲಿ  ಜಿಗಣೆ ಸೇರಿಕೊಂಡು ಹಾಯಾಗಿ ರಕ್ತ ಹೀರುತ್ತಿತ್ತು.   ನನಗೆ ಆಗ ಗೊತ್ತೇ ಆಗಲಿಲ್ಲ ಐದು ಕಿ.ಮೀ. ನಡೆದು ಡಾಂಬರು ರಸ್ತೆಯನ್ನು ಸೇರಿದೆವು. ಆಗಂತೂ ಎಲ್ಲರಿಗೂ ಬಹಳ ಸಂತೋಷವಾಗಿತ್ತು. ನನ್ನ ಶೂ ನಲ್ಲಿದ್ದ ಜಿಗಣೆ 'ಟೈಟ್' ಆಗಿತ್ತು. ಅದನ್ನು ಬಿಡಿಸುವುದರಲ್ಲಿ ಅದು ಸತ್ತೇ ಹೋಯಿತು.  ನಮಗೆ ಅಲ್ಲಿ ಒಂದು ಟ್ರ್ಯಾಕ್ಸ್ ಸಿಕ್ಕು ಅದರಲ್ಲೇ ಸುಬ್ರಹ್ಮಣ್ಯಕ್ಕೆ ಹೊರಟೆವು. ನಮ್ಮ ಅನುಭವ ನಿಜಕ್ಕೂ ಭಯಂಕರವಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ನಾವು ಸುಬ್ರಹ್ಮಣ್ಯಕ್ಕೆ ಬರಲು ಆಗುತ್ತಿರಲಿಲ್ಲ. ಸುಬ್ರಹ್ಮಣ್ಯಕ್ಕೆ ಬಂದ ತಕ್ಷಣ ನಾನು ಮನೆಗೆ ಫೋನಾಯಿಸಿದೆ ಮತ್ತು ಹೊಸ ಬ್ಯಾಗ್ ತಗೊಂಡೆ. ಎಲ್ಲರೂ ವಿರಮಿಸಿಕೊಲ್ಲುತ್ತಿರುವಾಗ ನಾನು ಮತ್ತು ಹರೀಶ್ 'ಆಶ್ಲೇಷ'ದಲ್ಲಿ ರೂಂ ಬುಕ್ ಮಾಡಿಬಂದೆವು. ಲಗೇಜ್ ಸಮೇತ ರೂಂ ನಂ. 417 ಗೆ ನಾನು ರಶ್ಮಿ ವಿಭಾ ಚಂದ್ರಿಕಾ ಬಂದೆವು. ಸ್ನಾನ ಮಾಡಿಕೊಂಡು ಸುಬ್ರಹ್ಮಣ್ಯನ ದರ್ಶನಕ್ಕೆ ಹೋಗುವುದೆಂದು ಅಂದುಕೊಂಡು ಸ್ನಾನ ಮಾಡಿ ತಯಾರಾದೆ. ಸೋಪ್ ಹಾಗು ಪೌಡರ್ ನ ಪುರಾಣವಂತೂ ಎಂದಿಗೂ ಮರೆಯಲಾಗದ್ದು. 

ಎಲ್ಲರೂ ಸುಬ್ರಹ್ಮಣ್ಯನ ದರ್ಶನ ಪಡೆದು ಪ್ರಸಾದವನ್ನು ಕೂಡ ಭಕ್ಷಿಸಿದೆವು. ಅಶ್ವಿನ್ ಹಾಗು ಮುತ್ತು ಪ್ಲಾನ್ ನಂತೆ ಕೆಲವರು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಮಧ್ಯದಲ್ಲಿ ಚಂದ್ರಣ್ಣ ಒಂದು ಸಾರಿ ಬೆಂಗಳೂರು ಮತ್ತೊಂದು ಸಾರಿ ಮಂಗಳೂರು ಎಂದು ಹೇಳಿ ಹರೀಶನಿಗೆ ಸ್ವಲ್ಪ ಆಟ ಆಡಿಸಿದ. ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಸುವ ಜವಾಬ್ದಾರಿ ಹರೀಶನೆ ವಹಿಸಿಕೊಂಡಿದ್ದ. ಚಂದ್ರಣ್ಣನ ನಿರ್ಧಾರ ಗಟ್ಟಿಯಾಗುವವರೆಗೂ ಹರೀಶನಿಗೆ ಟಿಕೆಟ್ ಬುಕ್ ಮಾಡಿಸಲು ಆಗಲಿಲ್ಲ. ಚಂದ್ರಣ್ಣ ಹೀಗೇ ಬೆಂಗಳೂರಿನಿಂದ ಮಂಗಳೂರಿಗೆ ಬದಲಾಯಿಸಿದ ಉದ್ದೇಶ ಏನೆಂದು ತಿಳಿಯಲಿಲ್ಲ. ಕೊನೆಗೆ ನಾನು ಹರೀಶ್ ವಿಭಾ ಬೆಂಗಳೂರಿಗೆ ಹೊರಡುವುದೆಂದೂ ಅವರೆಲ್ಲ ಮಂಗಳೂರಿಗೆ ಹೋಗುವುದೆಂದೂ ಮಾತಾಡಿಕೊಂಡೆವು.  ಟೆಂಟ್ ನಲ್ಲಿ ಒಂದು ದಿನವಾದರೂ ಇರಬೇಕೆಂದುಕೊಂಡಿದ್ದ ನಮ್ಮ ಆಸೆ, ಆಸೆಯಾಗಿಯೇ ಉಳಿಯಿತು. ಗ್ಯಾಸ್  ಸಿಲಿಂಡರ್ ಅನ್ನು  ಬೆಂಗಳೂರಿಗೆ ತೆಗೆದುಕೊಂಡು ಹೋಗಲು ನಾವು ನಿರಾಕರಿಸಿದ್ದಕ್ಕೆ ಅಶ್ವಿನ್ ಮುಖ ಊದಿಸಿಕೊಂಡಿದ್ದ. ರಾತ್ರಿ ಸುವರ್ಣ ಕರ್ನಾಟಕದ ಸಾರಿಗೆ ವಾಹನದಲ್ಲಿ ಬೆಂಗಳೂರಿನ ಕಡೆಗೆ ಮುಖಮಾಡಿದೆವು. ಅವರೆಲ್ಲ ಮಂಗಳೂರಿಗೆ ಬೀಚ್ ನೋಡಲು ಹೊರಟರು. ಇಲ್ಲಿಗೆ ನಮ್ಮ ಯಡಕುಮರಿಯ ಚಾರಣ ಸುಖಾಂತ್ಯ ಪಡೆದುಕೊಂಡಿತು. ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ಛಾಯಾಚಿತ್ರಗಳನ್ನು ನೋಡುತ್ತಿರುವಾಗ ಮನಸು ಹಿಂಗಾಲಿನಲ್ಲಿ ಯಡಕುಮರಿಯ ಕಡೆಗೆ ಓಡಿತ್ತು.

ಮಂಗಳವಾರ, ಮಾರ್ಚ್ 09, 2010

ಬ್ಲಾಗೋದಯ

ನನ್ನ ಬ್ಲಾಗಿನಲ್ಲಿ ಪ್ರಪ್ರಥಮವಾಗಿ ಪ್ರಕಟಿಸಲು ಅತ್ಯಂತ ಸೂಕ್ತವಾದ ಲೇಖನವೆಂದರೆ ಪ್ರಾಯಶಃ ಇದೇ ಇರಬಹುದೇನೋ.. ನಾನು ಬ್ಲಾಗು ಶುರು ಮಾಡಲು ಕಾರಣ ಮತ್ತು ಸ್ಫೂರ್ತಿ ನನ್ನ 'ಬೇಸರ' ಎಂದರೆ ಖಂಡಿತ ತಪ್ಪಾಗಲಾರದು. ನನ್ನ ಬೇಸರಿಕೆಯನ್ನು ಕಳೆಯಲು ಇದು ತುಂಬಾ ಸಹಕಾರಿಯಾಯಿತಲ್ಲದೆ, ನನ್ನ ಹವ್ಯಾಸವನ್ನು ನನಗೆ ಮರಳಿಸಿದೆ. ಅದಕ್ಕೋಸ್ಕರ ಈ ಬ್ಲಾಗಿಗೆ ಆರಂಭದಲ್ಲೇ ಧನ್ಯವಾದವನ್ನು ತಿಳಿಸುತ್ತೇನೆ. ಬ್ಲಾಗೋದಯ ನನ್ನ ಬ್ಲಾಗಿನ ಜನ್ಮ ಕಥೆ. ನನ್ನ ಬ್ಲಾಗ್ ಹುಟ್ಟಿದ ಕಥೆಯನ್ನು ನಿಮಗೆ ಹೇಳುತ್ತೇನೆ ಕೇಳುವಂಥವರಾಗಿ...

ಕಾಲೇಜಿನ ದಿನಗಳಲ್ಲಿ ಸದಾ ಓದುವುದು, ಓದುವುದಕ್ಕಿಂತಲೂ ಓದುತ್ತಿರುವ ಹಾಗೆ ನಟಿಸುವುದು.. ಹರಟೆ ಟೀಕೆಗಳಲ್ಲೇ ವ್ಯರ್ಥ ಕಾಲ ಹರಣ ಮಾಡುವುದು ಇದೇ ನನ್ನ ದಿನಚರಿಯ ಬಹುಮುಖ್ಯ ಭಾಗವಾಗಿತ್ತು. ಆಮೇಲೆ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೇಲೆ ಕೇಳಬೇಕೆ? ನನ್ನ ಅಮೂಲ್ಯ ಸಮಯವೆಲ್ಲ ಅತ್ತ ಕೆಲಸದಲ್ಲೂ ಅಲ್ಲದೆ ಇತ್ತ ಮನೆಯಲ್ಲೂ ಅಲ್ಲದೆ ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲೆ ಕಳೆದು ಹೋಗುತ್ತಿತ್ತು. ಈಗ ಮದುವೆಯಾಗಿ ಅಮೆರಿಕೆಗೆ ಬಂದ ಮೇಲೆ ದಿನವೆಲ್ಲ ಖಾಲಿ ಖಾಲಿ. ಸಮಯವೆಂಬೋ ಸಮಯವೆಲ್ಲ ನನ್ನ ಹತ್ತಿರವೇ ಇದೆಯೇನೋ ಅನ್ನಿಸುತ್ತಿತ್ತು. ನಾನು ನನ್ನ ಜೀವಮಾನದಲ್ಲೇ ಇಷ್ಟೊಂದು ಫ್ರೀಯಾಗಿ ಇದ್ದಿರಲಿಲ್ಲ. ಸಮಯ ಕಳೆಯಲು ಎಲ್ಲ ಸ್ನೇಹಿತರಿಗೆ ಫೋನಾಯಿಸುವುದು, ಅಂತರ್ಜಾಲದಲ್ಲಿ ತಡಕಾಡುವುದು ಹೀಗೆ ಕೆಲಸಕ್ಕೆ ಬಾರದ ಕೆಲಸಗಳನ್ನು ಮಾಡುತ್ತಿದ್ದೆ. ಬರೀ ಇದನ್ನೇ ಎಷ್ಟು ದಿವಸ ಮಾಡುವುದು? ಟಿವಿಯಾಗಲಿ ಐಪಾಡ್ ಆಗಲಿ ನನ್ನ ಬೇಸರಕ್ಕೆ ಸರಿಯಾದ ಸಂಗಾತಿಯಾಗಲಿಲ್ಲ. ಬದಲಿಗೆ ಟಿವಿಯಲ್ಲಿ ಬರುವ ಸೀರಿಯಲ್ಲುಗಳು ಶತ್ರುಗಳಾಗಿ ಬದಲಾದವು. ಒಂದು ಸಲ ನನ್ನ ಸ್ನೇಹಿತನಾದ ಹರೀಶ್ ನನ್ನ ಬೇಸರಕ್ಕೆ ಒಳ್ಳೆಯ ಉಪಶಮನವನ್ನು ಕೊಟ್ಟ ಏನೆಂದರೆ.. ಒಂದು ಬ್ಲಾಗ್ ಶುರು ಮಾಡುವುದು. ಕಾಲೇಜಿನ ದಿನಗಳಲ್ಲಿ ಹೀಗೆ ಸುಮ್ಮನೆ ಕಥೆ ಕವನ ಅದೂ ಇದೂ ಅಂತ ತುಂಬಾ ಬರೆಯುತ್ತಿದ್ದೆ. ಅದೇ ಹವ್ಯಾಸವನ್ನು ಮುಂದುವರೆಸು ಅದನ್ನೇ ಬ್ಲಾಗಿನಲ್ಲಿ ಪೋಸ್ಟ್ ಮಾಡು ಎಂದು ಹೇಳಿದ. ಸಲಹೆ ಏನೋ ಚೆನ್ನಾಗಿತ್ತು. ನನಗೂ ಕೂಡ ನನ್ನ ಅಭಿರುಚಿಯನ್ನು ಅಭಿವ್ಯಕ್ತಿಗೊಳಿಸಲು ಇದೇ ಸರಿಯಾದ ದಾರಿಎನಿಸಿ ಬ್ಲಾಗ್ ರಚಿಸಲು ಮುಂದಾದೆ. ಗಣಕಯಂತ್ರದ ಜ್ಞಾನ ತುಸು ಕಡಿಮೆ ಇದ್ದುದರಿಂದ ಬ್ಲಾಗ್ ಗೆ ಒಂದು ರೂಪ ಕೊಡುವುದರಲ್ಲಿ ಒಂದು ವಾರವೇ ಬೇಕಾಯಿತು. ಆದರೆ ಅದಕ್ಕೆ ಸರಿಹೊಂದುವಂತಹ ಶೀರ್ಷಿಕೆ ಕೊಡಲು ಒಂದು ತಿಂಗಳೇ ಬೇಕಾಯಿತು. ನನ್ನದೇ ಆದ ಈ ಬ್ಲಾಗಿಗೆ ಒಂದು ಮುದ್ದಾದ ಹೆಸರು ಕೊಡಬೇಕೆನಿಸಿ ಅಂತರ್ಜಾಲದ ಬ್ರಹ್ಮನೆನಿಸಿರುವ ಗೂಗಲ್ ನ ಮೊರೆಹೋದೆ. ಒಂದಷ್ಟು ಒಳ್ಳೆಯ ಶೀರ್ಷಿಕೆ ಸಿಕ್ಕವಾದರೂ ಮನಸಿಗೆ ಸಮಾಧಾನ ತರುವಂತಹ ನನ್ನ ಬ್ಲಾಗಿಗೆ ಇದೇ ತಕ್ಕ ಶೀರ್ಷಿಕೆ ಎನ್ನುವಂತಹ ಹೆಸರು ಅವ್ಯಾವವೂ ಆಗಿರಲಿಲ್ಲ. ಬ್ಲಾಗಿಗೆ ಹೆಸರಿಡಲು ನನ್ನ ಕನ್ನಡದ ಜ್ಞಾನವನನೆಲ್ಲ ಒರೆಗೆ ಹಚ್ಚಿದೆ. ಈ ನಾಮಕರಣವೆನ್ನುವುದು ಎಷ್ಟು ಕಷ್ಟದ ಕೆಲಸ ಎನ್ನುವ ಅರಿವು ನನಗೆ ಆಗಲೇ ಆಗಿದ್ದು. ಒಂದು ಹೆಸರನ್ನು ಆರಿಸಿಕೊಂಡರೆ ಇನ್ನೊಂದು ಚೆಂದವೆನಿಸುತ್ತಿತ್ತು. ಒಂದು ಹೆಸರನ್ನು ಆಯ್ಕೆ ಮಾಡಿಕೊಂಡು ಅದನ್ನು ಇಡೋಣವೆನ್ನುವಾಗ ಇನ್ನೊಂದು ಅದಕ್ಕಿಂತಲೂ ಸುಂದರವಾದ ಹೆಸರು ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಛೇ ಇದೇನಿದು ಬರೀ ಒಂದು ಶೀರ್ಷಿಕೆ ಕೊಡುವುದರಲ್ಲೇ ನಾನು ಸೋತು ಹೋದೆನೆ? ಇನ್ನು ಲೇಖನ ಬರೆದು ಪ್ರಕಟಿಸಲು ಸಾಧ್ಯವೇ? ಇದೆಲ್ಲ ಆಗದ ಮಾತು ಎಂದೆನಿಸಿ ನನ್ನ ಬ್ಲಾಗ್ ರಚನೆಯ ಕೆಲಸಕ್ಕೆ ಪ್ರಾರಂಭದಲ್ಲೇ ಅಂತ್ಯ ಹಾಡಿದೆ. ಸ್ವಲ್ಪ ದಿವಸಗಳ ನಂತರ ಹರೀಶ್ ಮತ್ತೆ ಈ ಬ್ಲಾಗ್ ರಚಿಸುವ ಬಗ್ಗೆ ಪ್ರಸ್ತಾಪ ಮಾಡಿದ. ಅವನ ಮಾತನ್ನು ಹಾಗೆ ತಳ್ಳಿಹಾಕಿದೆನಾದರೂ ಯಾವುದೋ ಮೂಲೆಯಲ್ಲಿ ರಚಿಸಿದ್ದ ಬ್ಲಾಗಿಗೆ ಹೆಸರುಕೊಟ್ಟು ಲೇಖನಗಳನ್ನು ಪ್ರಕಟಿಸುವ ಆಸೆ ಉಳಿದಿತ್ತು. ಒಂದು ದಿನ ಅಡುಗೆ ಕೆಲಸ ಮಾಡುತ್ತಿರುವಾಗ ನನ್ನ ಕಾಲೇಜಿನ ದಿನಗಳನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೆ. 'ನೆನಪು' ಎನ್ನುವುದರಬಗ್ಗೆ ಆಶುಭಾಷಣ ಸ್ಪರ್ಧೆಯಲ್ಲಿ ಮಾತಾಡಿ ಬಹುಮಾನವನ್ನೂ ಗಿಟ್ಟಿಸಿದ್ದೆ. ಸರಿ ಎನೋ ನೆನಪಾಯಿತು ನನ್ನ ಬ್ಲಾಗಿಗೆ ಶೀರ್ಷಿಕೆ ಹುಡುಕುತ್ತಿದ್ದೆನಲ್ಲವೆ? ನೆನಪು ಅಂತಲೇ ಹೆಸರಿಡೋಣ ಅಂದುಕೊಂಡು ಲ್ಯಾಪ್ಟಾಪ್ ತೆಗೆದೆ. ಮನಸು ಮತ್ತೆ ಕಾಲೇಜಿನ ದಿನಗಳತ್ತ ಓಡಿತು. ನಾವು ಮಾಡುತ್ತಿದ್ದ ತರಲೆಗಳು, ಪರೀಕ್ಷೆ ಬಂತೆಂದರೆ ಅಚ್ಚುಕಟ್ಟಾಗಿ ಒಟ್ಟಿಗೇ ಓದುವುದು, ಪರೀಕ್ಷೆ ಮುಗಿದಮೇಲೆ ಮನೆಯಲ್ಲಿ ಏನಾದರೊಂದು ನೆಪ ಹೇಳಿ ಪ್ರವಾಸಕ್ಕೆ ಹೊರಡುವುದು ಹೀಗೆ... ಲ್ಯಾಪ್ಟಾಪ್ ಆನ್ ಮಡಿದ ತಕ್ಷಣ ನಾನು ಮಾಡುವ ಮೊದಲ ಕೆಲಸವೆಂದರೆ ನನ್ನ ಜಿಮೈಲ್ ಓಪನ್ ಮಾಡಿ ನನ್ನ ಮೇಲ್ ಬಾಕ್ಸ್ ಚೆಕ್ ಮಾಡುವುದು. ಆದ್ದರಿಂದ ಈ ಬಾರಿಯೂ ಆ ಸಂಪ್ರದಾಯವನ್ನು ಮುರಿಯದೇ ನನ್ನ ಇನ್ ಬಾಕ್ಸ್ ನಲ್ಲಿ ಕಣ್ಣು ಹಾಯಿಸಿದೆ. ನನ್ನ ಬಾಲ್ಯ ಗೆಳತಿಯೊಬ್ಬಳಿಂದ ಸಂದೇಶ ಬಂದಿತ್ತು. ಮತ್ತೆ ನನ್ನ ಮನಸು ಶರವೇಗದಿಂದ ಬಾಲ್ಯದತ್ತ ಸಾಗಿತು. ಪ್ರಾಥಮಿಕ ಶಾಲೆಯಲ್ಲಿ ನಮಗೆ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ಬಹಳ ಆಸ್ಥೆಯಿಂದ ಕಲಿಸಿದ ಶಕುಂತಲ ಮಿಸ್, ದಿನವೂ ಶುದ್ಧ ಬರಹ (ಕಾಪಿ ರೈಟಿಂಗ್) ಬರೆಯದೆ ಇದ್ದಾಗ ಸಿಗುತ್ತಿದ್ದ ಕಠಿಣ ಶಿಕ್ಷೆ, ಗಾಂಧಿಜಯಂತಿಯ ಶ್ರಮದಾನ ಎಲ್ಲವೂ ನೆನಪಾಯಿತು. ತದನಂತರ ನಾನು ಆರನೇ ತರಗತಿಯಲ್ಲಿ ವಸತಿಶಾಲೆಯಾದ ನವೊದಯಕ್ಕೆ ಆಯ್ಕೆಯಾಗಿ, ನನ್ನ ಇಷ್ಟದ ಶಾಲೆ ಊರು ತಂದೆತಾಯಿ ಎಲ್ಲರನ್ನೂ ಬಿಟ್ಟು ನವೋದಯದಲ್ಲಿ ಐದು ವರ್ಷ ಓದಿದೆ. ಅಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ನಾವೆಲ್ಲಾ ದಿನವೂ ಗ್ರೇ ಅಂಡ್ ವೈಟ್ ಯುನಿಫಾರ್ಮ್ ತೊಟ್ಟು ಶಾಲೆಗೆ ಹೋಗುವುದು, ಐದು ಚರಣದ ನವೋದಯ ಗೀತೆಯನ್ನು ಆಕಳಿಸುತ್ತಾ ಹಾಡುವುದು, ಗಡಿಯಾರ ಸರಿಯಾಗಿ ಒಂದು ಗಂಟೆಬಾರಿಸುತ್ತಿದ್ದಂತೆ ತಕ್ಷಣ ತಟ್ಟೆ ಹಿಡಿದುಕೊಂಡು ನಾಮುಂದು ತಾಮುಂದು ಎಂದು ಮೆಸ್ ಹತ್ತಿರಕ್ಕೆ ಓಡುವುದು ಎಲ್ಲವೂ ನೆನಪಾಗಿ ನನಗರಿವಿಲ್ಲದಂತೆಯೇ ನಗು ಬಂತು. ನಮ್ಮ ಈ ನವೋದಯದ ಬಗ್ಗೆಯೇ ಒಂದು ಲೇಖನ ಬರೆಯಬೇಕು ಎನಿಸಿತು. ನನ್ನ ನವೋದಯ ಶಾಲೆಯ ದಿನಗಳನ್ನ ನಿಮ್ಮೊಂದಿಗೆ ಖಂಡಿತವಾಗಿಯೂ ಮುಂದೆ ಹಂಚಿಕೊಳ್ಳುತ್ತೇನೆ.

ಹೀಗೆ ಸಾಲುಸಾಲಾಗಿ ತೇಲಿ ಬಂದ ನೆನಪುಗಳಲ್ಲಿ ಮೈಮರೆತಿದ್ದ ನನಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ನಾನು ಯಾವ ಕೆಲಸಕ್ಕೆ ಈ ಲ್ಯಾಪ್ಟಾಪ್ ತೆಗೆದೆನೆಂದು ಕ್ಷಣಾರ್ಧದಲ್ಲಿ ಅರಿವಾಯಿತು. ಮನಸು ಸಿಕ್ಕ ಸಿಕ್ಕಲ್ಲಿ ಹರಿಯುತ್ತದೆ ಅದನ್ನು ಹತೋಟಿಗೆ ತೆಗೆದುಕೊಳ್ಳುವುದೇ ಹರಸಾಹಸ ಅಲ್ಲವೇ? ನನ್ನ ಬ್ಲಾಗಿಗೆ ನೆನಪು ಅಂತ ನಾಮಕರಣ ಮಾಡುವುದೆಂದು ತೀರ್ಮಾನಿಸಿ ಗಣಕಯಂತ್ರದ ಕೀಲಿಮಣೆಯ ಮೇಲೆ ಬೆರಳಾಡಿಸುತ್ತಿದ್ದಂತೆಯೇ ನೆನಪು ಎನ್ನುವ ಹೆಸರಿಗಿಂತ ನೆನಪಿನ ಮೆರವಣಿಗೆ ಎಂದು ಇಡೋಣವೆನಿಸಿತು. ಯಾಕೆಂದರೆ ಒಂದೇ ನೆನಪು ಬರಲು ಸಾಧ್ಯವೇ ಇಲ್ಲ. ಬೇಕಾದರೆ ನೀವೇ ಪರೀಕ್ಷೆ ಮಾಡಿಕೊಳ್ಳಿ.. ಬರೀ ಒಂದೇ ವಿಷಯವನ್ನು, ವ್ಯಕ್ತಿಯನ್ನು ಅಥವಾ ಯಾವುದೋ ಒಂದು ವಸ್ತುವನ್ನು ನೆನಪಿಸಿಕೊಂಡಾಗ ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ಇನ್ನೂ ಹತ್ತು ಹಲವು ನೆನಪುಗಳು ನಿಮ್ಮನ್ನು ಮುತ್ತಿಕೊಳ್ಳುತ್ತವೆ. ಒಂದನ್ನು ನೆನಪಿಸಿಕೊಂಡಾಗ ಅದರ ಹಿಂದೆ ಮತ್ತೊಂದು ನೆನಪು.. ಹೀಗೆ ನೆನಪುಗಳು ಮನಸಿನಲ್ಲಿ ಮೆರವಣಿಗೆ ಹೊರಟುಬಿಡುತ್ತವೆ. ನೆನಪುಗಳಲ್ಲಿ ಸಿಹಿ ಕಹಿಯ ನೆನಪುಗಳೂ ಇರುತ್ತವೆ. ಹಿಂದಿನ ನೆನಪುಗಳು ಮತ್ತು ಅವುಗಳಿಂದ ಕಲಿತ ಪಾಠ ಮುಂದಿನ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ. ನೆನಪಿನ ಬಗ್ಗೆ ಬರೆಯುತ್ತ ಹೋದರೆ ಸಾಕಷ್ಟು ಬರೆಯಬಹುದು. ಈಗ ಹೇಳಿ ನನ್ನ ಬ್ಲಾಗಿಗೆ 'ನೆನಪಿನ ಮೆರವಣಿಗೆ' ಯಷ್ಟು ಸೂಕ್ತ ಶೀರ್ಷಿಕೆ ಇನ್ನೊಂದಿಲ್ಲ ಅಲ್ಲವೇ? ಬ್ಲಾಗ್ ರಚಿಸಿ ಅದಕ್ಕೆ ಸರಿಯಾದ ಶೀರ್ಷಿಕೆ ಕೊಟ್ಟು ಮೊದಲನೆಯ ಈ ಲೇಖನವನ್ನು ಪ್ರಕಟಿಸುವ ಹೊತ್ತಿನಲ್ಲಿನನ್ನ ಮನಸು
ನನ್ನ ಬ್ಲಾಗು ನನ್ನದು...
ನನ್ನ ಪೋಸ್ಟು ನನ್ನದು...
ನನ್ನ ನೆನಪು ನನ್ನದು.. ಎಂದೆಂದಿಗೂ..
(ನನ್ನ ಹಾಡು ನನ್ನದು.... ಧಾಟಿಯಲ್ಲಿ)
ಎಂದು ಹಾಡುತ್ತಿದೆ.. ಈ ಬ್ಲಾಗಿನಲ್ಲಿ ನನ್ನ ನೆನಪಿನ ಭಂಡಾರದಲ್ಲಿರುವ ಸವಿನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಓದಿ ಆನಂದಿಸಿ.